ಬಹುಸಂಖ್ಯಾತರ ಕೆಂಗಣ್ಣಿಗೆ ಕಾಂಗ್ರೆಸ್ ಗುರಿ

0
20

ಹುಬ್ಬಳ್ಳಿ: ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿರುವ ಕಾಂಗ್ರೆಸ್ ಸರ್ಕಾರ, ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಅಲ್ಲದೆ, ಹಿಂದು-ಮುಸ್ಲಿಂ ಸಾಮರಸ್ಯದ ಜೀವನ ನಡೆಸದಂತಹ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರೆಗೋಡು ಹನುಮ ಧ್ವಜ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ. ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಅನ್ಯ ಕೋಮಿನ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದರೂ ಅವುಗಳ ಗೋಜಿಗೆ ಹೋಗದ ಕಾಂಗ್ರೆಸ್ ಸರ್ಕಾರ ಹನುಮ ಧ್ವಜವನ್ನು ಮಾತ್ರ ತೆರವುಗೊಳಿಸಿದೆ. ಇದು ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.
ಧ್ವಜ ತೆರವಿನ ಹಿನ್ನೆಲೆಯಲ್ಲಿ ಮಂಡ್ಯ, ಕೆರೆಗೋಡು ಭಾಗದ ಹಿಂದೂಪರ ಕಾರ್ಯಕರ್ತರು ಮಂಡ್ಯ ಬಂದ್‌ಗೆ ಕರೆ ನೀಡಿದ್ದಾರೆ. ಪ್ರತಿಭಟಿಸುವುದು ನಮ್ಮ ಹಕ್ಕು. ಆದರೆ, ಗಲಭೆ, ಕೋಮು ಸೌಹಾರ್ದತೆ ಹಾಳಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಪ್ರತಿಭಟಿಸೋಣ. ಹಿಂದೂ ಆಚರಣೆಗಳ ಬಗ್ಗೆ ಪೂರ್ವಾಗ್ರಹ ಹೊಂದಿರುವ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚುವ ಕೆಲಸ ಮಾಡೋಣ ಎಂದರು.
ನಮಾಜ್ ಸಮಯ ಹೊತರುಪಡಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಯೋಚಿಸಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ, ನಾವು ಯಾವ ದೇಶದಲ್ಲಿದ್ದೇವೆ? ಪರೀಕ್ಷೆಗೆ ಎಲ್ಲ ಧರ್ಮದ ಮಕ್ಕಳೂ ಹಾಜರಾಗಿರುತ್ತಾರೆ. ಕೇವಲ ಒಂದು ಕೋಮಿನವರ ಸಲುವಾಗಿ ಅನ್ಯರಿಗೆ ತೊಂದರೆ ನೀಡುವುದು ತಪ್ಪು. ಯಾವುದೇ ಕಾರಣಕ್ಕೂ ಹೀಗಾಗಲು ನಾವು ಬಿಡುವುದಿಲ್ಲ ಎಂದು ಕಿಡಿಕಾರಿದರು.

Previous articleಲೋಟಸ್ ಪಾಪ್‌ಕಾರ್ನ್
Next articleಪೇಚಿನಲ್ಲಿ ಪೇಟಿಎಂ