ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಅಂಗಡಿಗಳ ಸಾಮಗ್ರಿಗಳು ಸುಟ್ಟು ಲಕ್ಷಾಂತರು ರೂ. ಹಾನಿಯಾಗಿರುವ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಒಮ್ಮೆಲೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡಿದೆ. ಫರ್ನಿಚರ್ ಅಂಗಡಿ, ಬಟ್ಟೆ ಅಂಗಡಿ, ಮೊಬೈಲ್ ಶಾಪ್ ಸೇರಿದಂತೆ ನಾಲ್ಕೈದು ಅಂಗಡಿಗಳಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿದ್ದರಿಂದ ಪೀಠೋಪಕರಣ, ಬಟ್ಟೆ ಬರೆಗಳು ಸುಟ್ಟು ಕರಕಲಾಗಿವೆ.
ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಅಷ್ಟರಲ್ಲಾಗಲೇ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿತ್ತು. ಬೆಂಕಿ ಅವಘಡವನ್ನು ನೋಡಲು ರಸ್ತೆಯಲ್ಲಿ ಸಾವಿರಾರು ಜನರು ಸೇರಿದ್ದರು. ಇದರಿಂದ ಕೆಲ ಕಾಲ ಸಂಚಾರಕ್ಕೂ ಅಡತಡೆಯಾಯಿತು. ಪೊಲೀಸರು ಜನರನ್ನು ಚೆದುರಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.