ಬಸ್ ಗಾಜು ಒಡೆದು ಪರಾರಿಯಾದ ಸ್ಕೂಟರ್ ಸವಾರ

ಮಂಗಳೂರು: ಪಡಿಲ್ ಸಮೀಪದ ಅಳಪೆಯಲ್ಲಿ ಭಾನುವಾರ ರಾತ್ರಿ ಕೆ.ಎಸ್.ಆರ್.ಟಿ.ಸಿ. ಅಶ್ವಮೇಧ (ಮಂಗಳೂರು-ಮೈಸೂರು)ಬಸ್‌ಗೆ ಅಡ್ಡ ನಿಂತು ಹೆಲ್ಮೆಟ್‌ನಲ್ಲಿ ಬಡಿದು ಬಸ್ ಗಾಜು ಒಡೆದು ದ್ವಿಚಕ್ರ ಸವಾರ ಪರಾರಿಯಾಗಿದ್ದಾನೆ.
ಬಸ್ ಚಾಲಕ ಅರುಣ್ ಮಂಗಳೂರಿನಿಂದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಳಪೆಯಲ್ಲಿ ಸ್ಕೂಟರ್ ಸವಾರ ಅಡ್ಡ ಬಂದಿದ್ದಾನೆ. ಇದನ್ನು ಚಾಲಕ ಪ್ರಶ್ನಿಸಿದ್ದಾರೆ. ಆಗ ಬಸ್‌ಗೆ ಸ್ಕೂಟರ್ ಅಡ್ಡ ಇಟ್ಟು ತನ್ನಲ್ಲಿದ್ದ ಹೆಲ್ಮೆಟ್‌ನಿಂದ ಚಾಲಕನ ಬಲ ಬದಿಯ ಕಿಟಕಿಗೆ ಹೊಡೆದಿದ್ದಾನೆ. ಕಿಟಕಿ ಗಾಜು ಸಂಪೂರ್ಣ ಛಿದ್ರವಾಗಿದೆ. ಬಸ್‌ನ ಮುಂಭಾಗದ ಗಾಜು ಕೂಡಾ ಒಡೆದಿದೆ. ಚಾಲಕನ ಕೈಗೆ ಗಾಯವಾಗಿದೆ. ಸವಾರನನ್ನು ಹಿಡಿಯಲು ಯತ್ನಿಸಿದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.