ಜನವರಿ 25ರ ಮುಂಜಾನೆ ವೈದ್ಯ ಸುನಿಲ್ ಕುಮಾರ್ ಅವರನ್ನು ಅಪಹರಣ ಮಾಡಲಾಗಿತ್ತು.
ಬಳ್ಳಾರಿ: ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂದಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಬಳ್ಳಾರಿ ನಗರ ವಾಸಿಗಳಾದ ಶ್ರೀಕಾಂತ್ (44), ರಾಕೇಶ್(44), ತರುಣ್ (22), ಅರುಣ್(25), ಭೋಜರಾಜ್ (25), ಸಾಯಿಕುಮಾರ್(21) ಮತ್ತು ಪುರುಷೋತ್ತಮ್ ಬಂಧಿತರು. ಆರೋಪಿಗಳನ್ನು, ಬುಧವಾರ ಮುಂಜಾನೆ ಸ್ಥಳ ಮಹಜರು ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಶ್ರೀಕಾಂತ್ ಎಂಬಾತ ಗಾಂಧಿನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕಾಳಿಂಗ ಅವರ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಸಿಂಧೂರ್ ಅವರು ಶ್ರೀಕಾಂತ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಶ್ರೀಕಾಂತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ( ವಿಮ್ಸ್)ಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆಗೆ ಒಳಗಾದ ಕಾನ್‌ಸ್ಟೆಬಲ್ ಕಾಳಿಂಗ ಅವರಿಗೆ ಬೇರೆಡೆ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸಲಾಗಿದೆ. ಜನವರಿ 25ರ ಮುಂಜಾನೆ ಆರು ಗಂಟೆ ಸುಮಾರಿನಲ್ಲಿ ನಗರದ ಸತ್ಯನಾರಾಯಣಪೇಟೆ ಬಳಿ ವೈದ್ಯ ಸುನಿಲ್ ಕುಮಾರ್ ಅವರನ್ನು ಅಪಹರಣ ಮಾಡಲಾಗಿತ್ತು. ₹2 ಕೋಟಿ ಹಣ, ₹3 ಕೋಟಿಯಷ್ಟು ಚಿನ್ನದ ಗಟ್ಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಅದೇ ದಿನ ರಾತ್ರಿ 8ರ ಸುಮಾರಿನಲ್ಲಿ ಕುರುಗೋಡು ಬಳಿಯ ಸೋಮಸಮುದ್ರದ ಬಳಿ ಸುನಿಲ್ ಕುಮಾರ್ ಅವರನ್ನು ಬಿಟ್ಟಿದ್ದ ದುಷ್ಕರ್ಮಿಗಳು, ₹300 ನೀಡಿ ಮನೆಗೆ ಹೋಗುವಂತೆ ಹೇಳಿ ಹೋಗಿದ್ದರು. ಶ್ರೀಕಾಂತ್ ಮೇಲೆ ಈ ಹಿಂದೆಯೂ ಕೂಡ ಪ್ರಕರಣಗಳು ದಾಖಲಾಗಿವೆ. ಆರೋಪಿಗಳೆಲ್ಲರನ್ನೂ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲೇ ಬಂಧಿಸಲಾಗಿದೆ. ಸಿಸಿಟಿವಿಯಲ್ಲಿ ಕಾರಿನ ದೃಶ್ಯ ಸೆರೆಯಾಗಿತ್ತು. ಅದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ವಾಹನವು ಶ್ರೀಕಾಂತ್‌ನದ್ದು ಎಂಬುದು ಗೊತ್ತಾಗಿತ್ತು ಎಂದು ಎಸ್ಪಿ ಶೋಭಾ ರಾಣಿ ತಿಳಿಸಿದರು.