ಹೆಬ್ಬಳ್ಳಿ: ಹುಬ್ಬಳ್ಳಿ-ಹೆಬ್ಬಳ್ಳಿ ಮಧ್ಯೆ ಸಂಚರಿಸುವ ಬಸ್ ಸಮಸ್ಯೆ ಕುರಿತು ಇಲ್ಲಿನ ನಾಗರಿಕರು ಅನೇಕ ಬಾರಿ ಮನವಿ ಸಲ್ಲಿಸಿ, ಮೌಖಿಕವಾಗಿ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಸದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಪ್ರಯಾಣಿಕರು ಹೆಬ್ಬಳ್ಳಿಯಲ್ಲಿ ಸುಮಾರು 2 ಗಂಟೆಗಳ ಕಾಲ ಬಸ್ ತಡೆ ನಡೆಸಿ ಪ್ರತಿಭಟಿಸಿದರು.
ಕಳೆದ ಹಲವು ದಿನಗಳಿಂದ ಹೆಬ್ಬಳ್ಳಿ-ಹುಬ್ಬಳ್ಳಿ ಮಧ್ಯೆ ಸಂಚರಿಸುತ್ತಿದ್ದ ಬಸ್ ರದ್ದುಗೊಳಿಸಿ ಮೊರಬಗೆ ಓಡಿಸಲಾಗುತ್ತಿದೆ. ಇದನ್ನು ಓಡಿಸಬೇಡಿ ಹೆಬ್ಬಳ್ಳಿಗೆ ಮೊದಲೇ ಬಸ್ ಕಡಿಮೆ ಇದೆ ಎಂದು ಪ್ರಯಾಣಿಕರು ಅಧಿಕಾರಿಗಳಿಗೆ ತಿಳಿಸಿದರೂ ಅದನ್ನು ಪರಿಗಣಿಸದೆ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಸಮಸ್ಯೆ ಬಗೆಹರಿಸಿದ ಗ್ರಾಪಂ ಪ್ರತಿನಿಧಿಗಳು
ಬಸ್ ತಡೆದು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಗ್ರಾಪಂ ಅಧ್ಯಕ್ಷ ವಿಠ್ಠಲ ಭೋವಿ, ಸದಸ್ಯರುಗಳಾದ ಮಂಜುನಾಥ ಭೀಮಕ್ಕನವರ, ಸುರೇಶ ಬನ್ನಿಗಿಡಿದ, ಬಾಳು ಪ್ರಭಾಕರ ಸೇರಿದಂತೆ ಅನೇಕ ಸದಸ್ಯರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರಿಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಇಂದಿನಿಂದಲೇ ಮೊರಬಕ್ಕೆ ಪರ್ಯಾಯ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ರೀತಿ ಏಕಾಎಕಿ ಬಸ್ ತಡೆ ಹಿಡಿದರೆ ಜನರಿಗೆ ಸಮಸ್ಯೆ ಆಗುತ್ತೆ. ಅವರು ನಾಲ್ಕು ದಿನ ಕಾಲಾವಕಾಶ ಕೇಳಿದ್ದಾರೆ ಅದು ಈಡೇರದಿದ್ದರೆ ನೀವು ಪ್ರತಿಭಟನೆ ಮಾಡಿ ಎಂದು ಪ್ರತಿಭಟನಾ ನಿರತರ ಮನವೊಲಿಸಿದರು.
ಅದಕ್ಕೆ ಪ್ರತಿಭಟನಾಕಾರರು ನಾಲ್ಕು ದಿನದಲ್ಲಿ ಹೆಬ್ಬಳ್ಳಿಗೆ ಡಬಲ್ ಡೋರ್ ಬಸ್ ಬಿಡುವುದು, ಹಳೆ ಬಸ್ ನಿಲ್ದಾಣದವರೆಗೂ ಬಸ್ ಓಡಿಸುವುದು, ರಾತ್ರಿ 10ಕ್ಕೆ ವಸತಿ ಬಸ್ ಓಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.