ಬೆಳಗಾವಿ: ಪ್ರೀತಿಸಿದ ಯುವತಿಯೊಂದಿಗೆ ಮನಸ್ತಾಪ ಉಂಟಾದ ಕಾರಣಕ್ಕೆ ಮನನೊಂದ ಯುವಕ ಆಕೆಯನ್ನು ಚಾಕುವಿನಿಂದ ಇರಿದು ಕೊಂದು ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಶಹಾಪುರ ನಾಥಪೈ ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಯಳ್ಳೂರು ಗ್ರಾಮದ ಪ್ರಶಾಂತ ಕುಂಡೇಕರ(೨೯) ಎಂಬುವನೇ ಪ್ರೇಯಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಯುವಕ. ವೃತ್ತಿಯಲ್ಲಿ ಪೇಂಟರ್ ಆಗಿದ್ದ ಪ್ರಶಾಂತ ಹಾಗೂ ಐಶ್ವರ್ಯ ಲೋಹಾರ ನಡುವೆ ಕಳೆದ ಒಂದುವರೆ ವರ್ಷದಿಂದ ಪ್ರೀತಿ ಪ್ರಣಯ ಮುಂದುವರೆದಿತ್ತು. ಇವರ ಪ್ರೀತಿಗೆ ಮನೆಯವರ ವಿರೋಧ ಇದ್ದರೂ ಕೂಡಾ ಇಬ್ಬರೂ ಆಗಾಗ ಸೇರುತ್ತಿದ್ದರು. ಆದರೆ ಇತ್ತೀಚೆಗೆ ಅದ್ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಬ್ರೇಕಪ್ ಹಂತಕ್ಕೆ ಐಶ್ವರ್ಯ ಮಾತನಾಡಿದ್ದಾಳೆ. ಇದರಿಂದ ಪ್ರಶಾಂತ ಹುಚ್ಚನಂತಾಗಿದ್ದಾನೆ.
ಇಂದು ಶಹಾಪುರದ ತನ್ನ ಚಿಕ್ಕಮ್ಮನ ಮನೆಯಲ್ಲಿ ಐಶ್ವರ್ಯ ಒಬ್ಬಳೇ ಇದ್ದಾಳೆ ಎಂಬುದನ್ನು ತಿಳಿದುಕೊಂಡ ಪ್ರಶಾಂತ ಸಂಜೆ ಅಲ್ಲಿಗೆ ಹೋಗಿ ಅವಳನ್ನು ರಮಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಒಪ್ಪದೆ ಇದ್ದಾಗ ಚಾಕುವಿನಿಂದ ಆಕೆಯನ್ನು ಅಲ್ಲಿಯೇ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ತಾನು ಕೂಡಾ ಅದೇ ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಕಂಡವರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಆದರೆ ಅಷ್ಟರಲ್ಲಿ ಇಬ್ಬರೂ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಹಜರು ನಡೆಸುತ್ತಿದ್ದಾರೆ. ಶಹಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.