ಪ್ರಕರಣದ ಸಂಬಂಧ ದಾಖಲಾಗಿರುವ ದೂರಿನ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ
ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ರಾಜಕೀಯ ದ್ವೇಷದಿಂದ ಮಾಡಿರುವ ಆರೋಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಾಯ ರಾಜಕೀಯ ಪ್ರೇರಿತವಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್‌ನ ಗುತ್ತಿಗೆದಾರನ ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವಾಗಲಿ, ಸಾಕ್ಷ್ಯವಾಗಲಿ ಇಲ್ಲ. ಆದ್ದರಿಂದ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದಾಗ್ಯೂ ಯಾವುದೇ ವಿಚಾರಣೆಗೆ ತಾನು ಸಿದ್ಧವಿರುವುದಾಗಿ ಸಚಿವರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ದಾಖಲಾಗಿರುವ ದೂರಿನ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಸಿ.ಟಿ ರವಿ ಪ್ರಕರಣ ಸಿಐಡಿಗೆ: ಬಿಜೆಪಿಯವರು ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿಲ್ಲವೇ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆದ್ದರಿಂದ ಸಿಬಿಐಗೆ ತನಿಖೆ ವಹಿಸಬೇಕೆಂಬ ಬೇಡಿಕೆ ಮುಂದಿರಿಸಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಎಂಎಲ್‌ಸಿ ಸಿ.ಟಿ ರವಿಯವರ ಪ್ರಕರಣವನ್ನೂ ಸಿಐಡಿಗೆ ವಹಿಸಲಾಗಿದೆ. ಅವಾಚ್ಯ ಪದಬಳಕೆ ಆಗಿದೆಯಾ? ಇಲ್ಲವಾ? ಎಂಬ ಬಗ್ಗೆ ಎಫ್ ಎಸ್ ಎಲ್ ವರದಿ ಬರಲಿದೆ. ಮಹಿಳಾ ಸಚಿವರಿಗೆ ಅವಹೇಳನ ಮಾಡಿರುವ ಆರೋಪವಿದ್ದು, ಸಿ.ಟಿ.ರವಿಯವರ ಮೇಲೆ ದೂರು ದಾಖಲಾಗಿದೆ.
ಸಂಪುಟ ವಿಸ್ತರಣೆ: ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.