ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರಾಲುನಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಲು ಸಾರ್ವಜನಿಕರ ವಿರೋಧದ ನಡುವೆ ಗ್ರಾಪಂ ಪರವಾನಿಗೆ ನೀಡಿರುವುದನ್ನು ಮರುಪರಿಶೀಲಿಸುವಂತೆ ಅಲ್ಲಿನ ಗ್ರಾಮಸ್ಥರು ಹಿಂದೂ ಸಂಘಟನೆಗಳೊAದಿಗೆ ಮಂಗಳವಾರ ಸೇರಿ ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.
ಈ ಪ್ರದೇಶದಲ್ಲಿ ಇನ್ನೊಂದು ಪ್ರಾರ್ಥನಾ ಮಂದಿರವಿದ್ದು, ಈಗ ನಿರ್ಮಿಸಲುದ್ದೇಶಿಸಿರುವ ಪ್ರಾರ್ಥನಾ ಮಂದಿರ ಸ್ಥಳದಿಂದ 250 ಮೀಟರ್ ದೂರದಲ್ಲಿ ಬಬ್ಬು ಸ್ವಾಮಿ ದೈವಸ್ಥಾನವು ಅನಾದಿ ಕಾಲದಿಂದಲೂ ಪರಿಸರದ ಊರ ಹಾಗೂ ಪರವೂರ ಭಕ್ತಾರಿಂದ ಆರಾಧಿಸಲ್ಪಡುವ ಕಾರಣಿಕ ಕ್ಷೇತ್ರವಾಗಿದೆ. ತಂಬಿಲ, ಕೋಲ, ಸಂಕ್ರಮಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಸಾಕಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುವ ಇಲ್ಲಿ ಇನ್ನೊಂದು ಧರ್ಮದ ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಲ್ಲಿ ಶ್ರೀ ಕ್ಷೇತ್ರದ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಆತಂಕ ಉಂಟಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
೨೦೨೧ರಿಂದಲೂ ಅಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಅಂದಿನಿಂದಲೇ ಗ್ರಾಪಂಗೆ ೩ ಬಾರಿ ಹಾಗೂ ಜಿಲ್ಲಾಧಿಕಾರಿಗೆ ಒಂದು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದರು. ಇದೀಗ ಗ್ರಾಮ ಪಂಚಾಯತ್ ಏಕಾಏಕಿ ಪರವಾನಿಗೆ ನೀಡಿರುವುದು ಹಿಂದೂ ಸಂಘಟನೆಗಳು ಹಾಗೂ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಪರವಾನಿಗೆಯನ್ನು ಮರುಪರಿಶೀಲಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಸಂಘಟನೆಗಳವರು ಪಿಡಿಒ ಅವರನ್ನು ಒತ್ತಾಯಿಸಿದರು.
ಪಿಡಿಒ ಶಶಿಧರ್ ಪ್ರತಿಕ್ರಿಯಿಸಿ, ಗ್ರಾಮಸ್ಥರ ವಿರೋಧವನ್ನು ಪರಿಗಣಿಸಿ ಪರವಾನಿಗೆ ನೀಡಿರುವುದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.