ನವದೆಹಲಿ: ಕೆಲವು ವಿಮಾನಯಾನ ಸಂಸ್ಥೆಗಳು ಪ್ರಯಾಗ್‌ರಾಜ್‌ಗೆ ಹೋಗುವ ವಿಮಾನಗಳ ದರವನ್ನು ಅತಿ ಏರಿಕೆ ಮಾಡಿರುವುದರಿಂದ ಮಹಾ ಕುಂಭಮೇಳಕ್ಕೆ ಭೇಟಿ ನೀಡಲು ಭಕ್ತರು ಅನಾನುಕೂಲತೆಗಳನ್ನು ಎದುರಿಸುತ್ತಿದ್ದು, ತಕ್ಷಣ ವಿಮಾನಯಾನ ಸಂಸ್ಥೆಗಳು ದರ ಪರಿಷ್ಕರಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿರುವ ಜೋಶಿಯವರು, ವಿಮಾನಯಾನ ಕಂಪನಿಗಳು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂದರ್ಭದ ಲಾಭವನ್ನು ಪಡೆದು ವಿಮಾನ ದರದಲ್ಲಿ ವಿಪರೀತ ಹೆಚ್ಚಳವನ್ನು ಮಾಡುತ್ತಿವೆ. ಎಕಾನಮಿ ದರ್ಜೆಯ ದರ ಶೇ. ೨೦೦ರಿಂದ ೭೦೦ ವರೆಗೂ ಹೆಚ್ಚಿಸಿವೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಜೋಶಿಯವರು ಮಹಾಕುಂಭಕ್ಕೆ ಭೇಟಿ ನೀಡಿ ಅಲ್ಲಿಂದ ಹಿಂದಿರುಗುವ ಶ್ರದ್ಧಾಳುಗಳಿಗೆ ಗಂಭೀರ ತೊಂದರೆಯಾಗಿವೆ ಎಂದು ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ವಿಮಾನಯಾನ ಕಂಪನಿಗಳು ತಮ್ಮ ದರಗಳನ್ನು ಮಿತಿಗೊಳಿಸಬೇಕು ಮತ್ತು ಸೇವೆಗಳನ್ನು ವಿಸ್ತರಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಗಮನ ನೀಡಬೇಕು ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.