ಯಾದಗಿರಿ: ರಾಜ್ಯದ ಬಿಜೆಪಿ ಸಂಸದರು ಪಿಎಂ ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ಮಾತಾಡಲು ಗಡ, ಗಡ ನಡುಗುತ್ತಾರೆ. ಇಂತವರು ರಾಜ್ಯದ ಅಭಿವೃದ್ಧಿ ಬಗ್ಗೆ ಟೀಕಿಸುವ, ಜನಾಕ್ರೋಶ ಯಾತ್ರೆ ನಡೆಸುವ ಯಾವ ನೈತಿಕೆತೆ ಇಲ್ಲಾ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪಾಲಿನ ಜಿಎಸ್‌ಟಿ ಹಣ ಕೇಳವುದಕ್ಕೆ ರಾಜ್ಯದ ಸಂಸದರು ಬಾಯಿ ಮುಚ್ಚಿಕೊಂಡು ಇರುವುದೇಕೆ? ರಾಜ್ಯದ ಅಭಿವೃದ್ಧಿ ಬಗ್ಗೆ, ಬೆಲೆ ಏರಿಕೆ ಬಗ್ಗೆ ಟೀಕಿಸುವ ಬಿಜೆಪಿಗರು ಪ್ರದಾನಿ ಭೇಟಿ ಮಾಡಿ ರಾಜ್ಯದ ಪಾಲಿನ ಜಿಎಸ್‌ಟಿ ಕೇಳಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರವೇ ಪೆಟ್ರೋಲ್, ಗ್ಯಾಸ್ ಸೇರಿದಂತೆಯೇ ಇತರ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಮೊದಲು ತಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡಲಿ, ಅದು ಬಿಟ್ಟು ಇಲ್ಲಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುವ ಯಾವುದೇ ನೈತಿಕತೆ ಬಿಜೆಪಿಗರಿಗೆ ಇಲ್ಲಾ, ಇಂತ ಹತ್ತು ಜನಾಕ್ರೋಶ ಯಾತ್ರೆಗಳು ಮಾಡಿದರೂ ಏನೂ ಆಗೋದಿಲ್ಲ ರಾಜ್ಯದ ಜನರಿಗೆ ವಾಸ್ತವಾಂಶ ಗೊತ್ತಿದೆ. ಬಿಜೆಪಿಯವರು ಈಗ ಖಾಲಿ ಇದ್ದಾರೆ. ಹೋರಾಟ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು.
ಮಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ನೇಮಕದ ಕುರಿತು ಯಾವುದೇ ಹೇಳಿಕೆ ತಾವು ನೀಡುವುದಿಲ್ಲ. ಎಐಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ಪಕ್ಷದ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸದಂತೆ ಸೂಚನೆ ನೀಡಿದ್ದಾರೆ. ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ನೇಮಕ ಎಲ್ಲವೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ. ೧ ಇದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗರಡ್ಡಿ ಅವರು ಹೇಳಿದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಗ್ಗೆ ಹೊರತು ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವುದಲ್ಲಾ, ಭ್ರಷ್ಟಾಚಾರ ಪರಿಚಯಿಸಿದ್ದೇ ಬಿಜೆಪಿ ನಾಯಕರು. ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಅಧಿಕಾರ ಹಿಡಿಯುವ ಬುನಾದಿ ಹಾಕಿದ್ದು ಬಿಜೆಪಿ ಪಕ್ಷದವರೇ ಎಂದ ಟಾಂಗ್ ನೀಡಿದರು.