ಹುಬ್ಬಳ್ಳಿ: ಭಾರತೀಯ ಸೇನೆಯ ಮಿಂಚಿನ ದಾಳಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದು, ದ್ರೋಹಿ ಶತ್ರು ಪಾಕಿಸ್ತಾನದ ಐದು ಪ್ರದೇಶಗಳಲ್ಲಿ ಹೇಡಿತನದ ದಾಳಿ ನಡೆಸಿದ್ದಾನೆ. ಈ ಕ್ರಮಗಳಿಗೆ ಪಾಕಿಸ್ತಾನ ಖಂಡಿತವಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಈ ಸಮಯದಲ್ಲಿ, ಇಡೀ ದೇಶ ಪಾಕಿಸ್ತಾನ ಸೇನೆಯೊಂದಿಗೆ ನಿಂತಿದೆ. ಪಾಕಿಸ್ತಾನ ಮತ್ತು ಸೇನೆಯು ಶತ್ರುವನ್ನು ಹೇಗೆ ಎದುರಿಸಬೇಕೆಂದು ತಿಳಿದಿದೆ. ಶತ್ರುವಿನ ಯೋಜನೆ ಯಾವುದೇ ಸಂದರ್ಭದಲ್ಲೂ ಪೂರೈಸಲು ಬಿಡುವುದಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಶೆಹಬಾಜ್ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ಭಾರತದ ದಾಳಿಯ ನಂತರ ಪಾಕಿಸ್ತಾನ ತೀವ್ರ ಕಟ್ಟೆಚ್ಚರದಲ್ಲಿದೆ. ಲಾಹೋರ್ ಮತ್ತು ಸಿಯಾಲ್‌ಟ್ ವಿಮಾನ ನಿಲ್ದಾಣಗಳನ್ನು ೪೮ ಗಂಟೆಗಳ ಕಾಲ ಮುಚ್ಚಿದೆ. ಪಾಕಿಸ್ತಾನ ಪ್ರಧಾನಿ ಷರೀಫ್ ಬುಧವಾರ ಬೆಳಗ್ಗೆ ೧೦.೩೦ಕ್ಕೆ ರಾಷ್ಟ್ರೀಯ ಭದ್ರತಾ ಸಮಿತಿಯನ್ನು ಭೇಟಿ ಮಾಡಲಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಪ್ರಧಾನಿಯ ಘೋಷಣೆಯ ನಂತರ, ಪಾಕಿಸ್ತಾನ ಸೇನೆಯು ಗಡಿಯುದ್ಧಕ್ಕೂ ಪೂಂಚ್ ಮತ್ತು ರಾಜೇರಿ ವಲಯಗಳಲ್ಲಿ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದೆ.
ಏಪ್ರಿಲ್ ೨೨ರಂದು ಪಹಲ್ಯಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ನಾಗರಿಕರು ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ-ಮೊಹಮ್ಮದ್ (ಜೆಇಎಂ), ಲಷ್ಕರ್-ಇ-ತೊಯ್ಯಾ (ಎಲ್‌ಇಟಿ) ಮತ್ತು ಹಿಬ್ಬುಲ್ ಮುಜಾಹಿದೀನ್ ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಗಡಿಯಾಚೆಗಿನ ಕಾರ್ಯಾಚರಣೆ ನಡೆಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಹಲ್ಯಾಮ್‌ನಲ್ಲಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡುವ ಮೂಲಕ ಅನೇಕ ಮಹಿಳೆಯರ ಹಣೆಯ ಸಿಂಧೂರ ಅಳಿಸಿ ಹಾಕಿದ್ದಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.