ಪ್ರಚೋದನಕಾರಿ ಹೇಳಿಕೆ: ಪ್ರಮುಖ ಆರೋಪಿ ಕಬೀರ್ ಖಾನ್ ಅಜ್ಮೀರ್‌ದಲ್ಲಿ ಬಂಧನ

ದಾವಣಗೆರೆ: ಕೇಂದ್ರ ಸರ್ಕಾರದ ವಕ್ಫ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ದಂಗೆ ಏಳುವಂತೆ, ರೈಲು, ಬಸ್‌ಗಳ ಸುಡುವಂತೆ, ಹುತಾತ್ಮರಾಗುವಂತೆ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ ಪ್ರಕರಣದ ಪ್ರಮುಖ ಆರೋಪಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕಬೀರ್‌ಖಾನ್‌ನನ್ನು ದಾವಣಗೆರೆ ಪೊಲೀಸರು ರಾಜಸ್ಥಾನದ ಅಜ್ಮೀರ್‌ನಲ್ಲಿ ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರಚೋದನಕಾರಿ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ನಂತರ ದಾವಣಗೆರೆಯಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಕಬೀರ್ ಖಾನ್ ಬಂಧನಕ್ಕೆ ಒತ್ತಾಯವಿತ್ತು. ಕಬೀರ್‌ಖಾನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೇರೆ ರಾಜ್ಯಕ್ಕೆ ಪರಾರಿ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಖಚಿತ ಮಾಹಿತಿ ಮೇರೆಗೆ ಅಜ್ಮೀರ್‌ನಲ್ಲಿ ಕಬೀರ್‌ಖಾನ್‌ನನ್ನು ಬಂಧಿಸಲಾಗಿದೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಚೋದನಾಕಾರಿ ವಿಡಿಯೋ ಬಿಡುಗಡೆ ಪ್ರಕರಣದ ಎರಡನೇ ಆರೋಪಿ ಭಾಷಾನಗರದ ಅಬ್ದುಲ್ ಗನಿ, ಮೂರನೇ ಆರೋಪಿ ಮಹಮ್ಮದ್ ಜುಬೇರ್ ಎಂಬಿಬ್ಬರನ್ನು ಈಚೆಗೆ ಬಂಧಿಸಲಾಗಿತ್ತು.