ಕುಣಿಗಲ್: ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುವ ಮೈದಾನದಲ್ಲೆ ಕೆಲ ಅಪ್ರಾಪ್ತರು ಪ್ಯಾಲಿಸ್ಟೈನ್ ಧ್ವಜ ಹಾರಿಸಲು ಮುಂದಾದ ಘಟನೆ ನಡೆಯಿತು.
ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಅಂಗವಾಗಿ ಶಾಲಾ ವಿದ್ಯಾರ್ಥಿನಿ ಸ್ವಾತಂತ್ರ್ಯೋತ್ಸವದ ಬಗ್ಗೆ ಭಾಷಣ ಮಾಡುವ ಹಂತದಲ್ಲೆ, ಮೈದಾನದ ಒಂದು ಬದಿಯಲ್ಲಿ ಬಂದ ಅಪ್ರಾಪ್ತರ ಗುಂಪೊಂದು ಪ್ಯಾಲಿಸ್ಟೈನ್ ಧ್ವಜ ಹಿಡಿದು ಅದನ್ನು ಕೋಲಿಗೆ ಸಿಲುಕಿಸಿ ಹಾರಾಡಿಸಲು ಮುಂದಾದದರು.
ಇದನ್ನು ಗಮನಿಸಿದ ವಿದ್ಯಾರ್ಥಿಗಳು, ಕೆಲ ಯುವಕರು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಮತ್ತೊಂದು ದೇಶದ ಭಾವುಟ ಹಾರಿಸಿ ಸಂಭ್ರಮಿಸುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು, ಅದರೂ ಅಪ್ರಾಪ್ತರು ಸ್ಪಂದಿಸದೆ ಇದ್ದಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿ ನೀಡಿದವರ ಮೊಬೈಲ್ ಕಸಿದು, ನಿಂದಿಸಿ, ಬೇರೆ ದೇಶದ ಧ್ವಜ ಹಾರಿಸಲು ಮುಂದಾದವರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಸಂಭವಿಸಿದ ತಪ್ಪನ್ನು ತಡೆಯಲು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರೆ ನಮ್ಮನ್ನು ನಿಂಧಿಸಿ, ನಮ್ಮ ಫೋನ್ ಪಡೆದಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಘಟನಾ ಸ್ಥಳಕ್ಕೆ ಎಸ್‌ಪಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.