ಕಲಬುರಗಿ: ಪೊಲೀಸ್ ಹುದ್ದೆಗೆ ನೇಮಕಾತಿ ಮಾಡಿಸುವುದಾಗಿ ನಂಬಿಸಿ ಐವರು ಅಭ್ಯರ್ಥಿಗಳಿಂದ ೩೧ ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಸಾವಳಗಿ(ಬಿ) ಗ್ರಾಮದ ಚೆನ್ನಬಸಪ್ಪ ನಿಂಬಾಳ ಎಂಬುವವರು ಮಹಾರಾಷ್ಟ್ರ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲ್ಲೂಕಿನ ಜಾಂಬಳಿ ಗ್ರಾಮದ ಹೇಮಂತ ಪಾಟೀಲ್ ಎಂಬುವವರ ವಿರುದ್ಧ ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಸ್‌ಎಸ್‌ಎಲ್‌ಸಿಯವರೆಗೆ ಓದಿರುವ ಚೆನ್ನಬಸಪ್ಪ ಅವರು ಯಾವುದೇ ಕೆಲಸ ಸಿಗದ ಕಾರಣ ತಮ್ಮ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದರು. ೨೦೨೦ನೇ ಸಾಲಿನಲ್ಲಿ ಪೊಲೀಸ್ ಪೇದೆ ಹುದ್ದೆಗೆ ಅರ್ಜಿ ಕರೆದಾಗ ಅವರು ಸುರೇಶ, ಚೆನ್ನವೀರ ತಾಳಿಕೋಟ, ದಿವಾಕರ, ಪ್ರಿಯಾಂಕಾ ಅವರೊಂದಿಗೆ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಗ್ರಾಮದ ಗುರುರಾಜ ಹಡಗಿಲ್ ಅವರು ತಮ್ಮ ಪತ್ನಿಗೆ ಪೊಲೀಸ್ ಹುದ್ದೆ ನೇಮಕಾತಿ ಮಾಡಿಸಲು ತಮಗೆ ಪರಿಚಯದ ಅರುಣಕುಮಾರ ಮುಖಾಂತರ ಅವರ ಸ್ನೇಹಿತ ಹೇಮಂತ ಪಾಟೀಲ್ ಎಂಬುವವರಿಗೆ ೨ ಲಕ್ಷ ರೂಪಾಯಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಹೇಮಂತ ಪಾಟೀಲ್ ಜೊತೆ ಮಾತನಾಡುವಂತೆ ತಿಳಿಸಿದ್ದಾರೆ. ಆಗ ಗುರುರಾಜ ಅವರು ಹೇಮಂತ ಪಾಟೀಲ್ ಜೊತೆ ಮಾತನಾಡಿದ್ದು, ಆಗ ಆತ ಪೊಲೀಸ್ ಹುದ್ದೆ ನೇಮಕಾತಿಗೆ ಮೊದಲು ಒಂದು ಲಕ್ಷ ರೂ.ಕೊಡಬೇಕು, ನೇಮಕಾತಿ ಪಟ್ಟಿ ಹಚ್ಚಿದ ನಂತರ ೭ ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದಾನೆ.
ಆದರಂತೆ ಆತನ ಮಾತು ನಂಬಿ ಗುರುರಾಜ ಮುಖಾಂತರ ನಾಲ್ವರು ತಲಾ ಒಂದೊಂದು ಲಕ್ಷ ನೀಡಿದ್ದಾರೆ. ಪೊಲೀಸ್ ನೇಮಕಾತಿ ಪಟ್ಟಿ ಹಚ್ಚಿದಾಗ ಅದರಲ್ಲಿ ತಮ್ಮ ಹೆಸರು ಇಲ್ಲದೇ ಇರುವುದನ್ನು ನೋಡಿ ಹೇಮಂತ ಪಾಟೀಲಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ಆತ ಪ್ರತಿಯೊಬ್ಬರು ಉಳಿದ ೭ ಲಕ್ಷ ಹಣ ಕೊಡಿ ಆಗ ಇನ್ನೊಂದು ಪಟ್ಟಿಯಲ್ಲಿ ಹೆಸರು ಬರುತ್ತದೆ ಎಂದು ಮತ್ತೆ ನಂಬಿಸಿದ್ದಾನೆ.
ಇದನ್ನು ನಂಬಿ ಚೆನ್ನಬಸಪ್ಪ ೮ ಲಕ್ಷ, ದಿವಾಕರ ೮ ಲಕ್ಷ, ಸುರೇಶ ೮ ಲಕ್ಷ, ಚೆನ್ನವೀರ ೫ ಲಕ್ಷ, ಪ್ರಿಯಾಂಕ್ ೨ ಲಕ್ಷ ರೂ. ಸೇರಿದಂತೆ ಒಟ್ಟು ೩೧ ಲಕ್ಷ ರೂಗಳನ್ನು ಪೂಲಾಬಾಯಿ, ಹೇಮಂತ ಪಾಟೀಲ್ ಪತ್ನಿ ಶಾಂಬಲಾ ಅವರ ಬ್ಯಾಂಕ್ ಖಾತೆಗೆ ಮತ್ತು ಫೋನ್ ಪೇ ಮುಖಾಂತರ ಹಾಕಿದ್ದಾರೆ. ಎರಡ್ಮೂರು ವರ್ಷವಾದರೂ ಪೊಲೀಸ್ ಹುದ್ದೆ ನೇಮಕಾತಿಯ ಯಾವುದೇ ಪಟ್ಟಿ ಹಚ್ಚದೇ ಇರುವುದರಿಂದ ಎಚ್ಚೆತ್ತುಕೊಂಡು ಇದೀಗ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಹೇಮಂತ ಪಾಟೀಲ್ ವಿರುದ್ಧ ದೂರು ಸಲ್ಲಿಸಿದ್ದಾರೆ.