ಪೊಲೀಸ್ ವೈಫಲ್ಯ ಪಾಟೀಲ್ ಪರಾರಿ

0
5

ಪಿಎಸ್‌ಐ ಹಗರಣ ಹಾಗೂ ಕೆಇಎ ನೇಮಕಾತಿ ಹಗರಣದಲ್ಲಿ ಕಲಬುರ್ಗಿಯ ಆರ್.ಡಿ. ಪಾಟೀಲ್ ಪ್ರಮುಖ ಕಿಂಗ್‌ಪಿನ್. ಈತನನ್ನು ಬಂಧಿಸುವುದಕ್ಕೆ ಪೊಲೀಸರು ಮೀನಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣ.

ಕಲಬುರ್ಗಿಯಲ್ಲಿ ಕೆಇಎ ಪರೀಕ್ಷೆಯ ಅಕ್ರಮಗಳಿಗೆ ಕಿಂಗ್‌ಪಿನ್ ಆಗಿರುವ ಆರ್. ಡಿ. ಪಾಟೀಲ್ ಪರಾರಿಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಲಬುರ್ಗಿಯಲ್ಲೇ ಇದ್ದರೂ ಆತ ಪೊಲೀಸರ ಕೈಗೆ ಸಿಗಲಿಲ್ಲ. ಪಾಟೀಲ್ ಕಲಬುರ್ಗಿಯಲ್ಲೇ ಇರುವುದು ಪೊಲೀಸರಿಗೆ ಬೆಳಗ್ಗೆಯೇ ಮಾಹಿತಿ ಬಂದಿತ್ತು. ಅವರು ಮನೆ ಬಳಿ ಹೋಗಲು ವಿಳಂಬ ಮಾಡಿದರು. ಆತ ಹಿಂದಿನಿಂದ ಪರಾರಿಯಾಗಿದ್ದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೆಲ್ಲವನ್ನೂ ನೋಡಿದರೆ ಪಾಟೀಲ್ ಎಷ್ಟು ಪ್ರಭಾವಶಾಲಿ ವ್ಯಕ್ತಿ ಎಂಬುದು ತಿಳಿಯುತ್ತದೆ. ಕಳೆದ ವರ್ಷ ಜನವರಿಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಇದೇ ಆರ್. ಡಿ. ಪಾಟೀಲ್ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದ. ಕೊನೆಗೆ ಶರಣಾಗಿ ಜಾಮೀನಿನ ಮೇಲೆ ಹೊರಬಂದಿದ್ದ. ಕಲಬುರ್ಗಿಯಂತ ಹಿಂದುಳಿದ ಪ್ರದೇಶದಲ್ಲಿ ಸರ್ಕಾರಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಉದ್ಯೋಗ ಹಿಡಿಯಲು ಎಲ್ಲರೂ ಯತ್ನಿಸುತ್ತಾರೆ. ಉದ್ಯೋಗ ಕೊಡಿಸುವ ಮಧ್ಯವರ್ತಿಗಳ ಕಿಂಗ್‌ಪಿನ್ ಪಾಟೀಲ್ ಆಗಿರುವುದು ಸ್ಪಷ್ಟ. ಈತನ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡುವುದು. ಅದಕ್ಕಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು.
ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪ್ರಮುಖ. ಇಂಥ ಕಿಂಗ್‌ಪಿನ್‌ಗಳಿಗೆ ರಾಜಕೀಯ ಆಸರೆ ಇರಬಾರದು. ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೆ ಪಾಟೀಲ್ ಅಂಥವರನ್ನು ಹಿಡಿಯುವುದು ಕಷ್ಟವೇನಲ್ಲ. ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆದರೆ ಪಾಟೀಲ್ ಅಂಥವರಿಗೆ ಕೆಲಸ ಇರುವುದಿಲ್ಲ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ಹಿಂದೆ ಬೆಂಗಳೂರಿನಲ್ಲೇ ನಡೆಸಲಾಗುತ್ತಿತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಇರುವುದರಿಂದ ಪರೀಕ್ಷೆಯನ್ನು ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ನಡೆಸುವುದು ಅನಿವಾರ್ಯ. ಇದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಇದಕ್ಕೆ ಹೊರಗಿನವರನ್ನು ನೇಮಿಸುವುದು ಸೂಕ್ತ.
ಹಿಂದೆ ಕಲಬುರ್ಗಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ವಿಧಿಸಬೇಕಿತ್ತು. ಸಬ್ ಇನ್‌ಸ್ಪೆಕ್ಟರ್ ಮೋಟಾರ್ ಬೈಕ್‌ನಲ್ಲಿ ಕುಳಿತು ಶಾಲೆ ಸುತ್ತ ಗಿರಕಿ ಹೊಡೆದು ಕಾಪಿ ಮಾಡುವುದನ್ನು ತಪ್ಪಿಸಬೇಕಿತ್ತು. ಈಗ ಅಂಥ ಪರಿಸ್ಥಿತಿ ಇಲ್ಲ. ಕಲಬುರ್ಗಿಯಲ್ಲಿ ಶೈಕ್ಷಣಿಕ ಸವಲತ್ತು ಉತ್ತಮಗೊಂಡಿದೆ. ಎಂಜನಿಯರಿಂಗ್, ಮೆಡಿಕಲ್ ಹಿಡಿದು ಎಲ್ಲ ರೀತಿಯ ಶಿಕ್ಷಣ ಪಡೆಯಲು ಅವಕಾಶಗಳಿವೆ. ಅದೇರೀತಿ ಉದ್ಯೋಗ ಅವಕಾಶಗಳು ಅಧಿಕಗೊಂಡಿವೆ. ಇವುಗಳ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವುದು ಬಹಳ ಮುಖ್ಯ. ವೈದ್ಯರು, ಕಲಾವಿದರು ಕಲಬುರ್ಗಿಯಿಂದ ಬಂದವರು ಈಗ ಹೊರ ರಾಜ್ಯಗಳಲ್ಲಿ ಉತ್ತಮ ಹೆಸರುಗಳಿಸಿದ್ದಾರೆ. ಪಾಟೀಲ್ ಅಂಥವರಿಗೆ ಅವಕಾಶ ನೀಡುವುದನ್ನು ಸ್ಥಳೀಯರೇ ತಪ್ಪಿಸಬೇಕು.
ಜನರ ಸಹಕಾರ ಇದ್ದಲ್ಲಿ ಅಕ್ರಮ ನಡೆಸುವ ಗ್ಯಾಂಗ್‌ಗಳನ್ನು ದಮನ ಮಾಡಬಹುದು. ಯಾವುದೇ ಪರೀಕ್ಷೆ ಇರಲಿ, ನಕಲು ಮಾಡುವುದಕ್ಕೆ ಅವಕಾಶ ನೀಡಬಾರದು. ಶಿಕ್ಷಣ ಮಟ್ಟ ಉತ್ತಮಗೊಳ್ಳುತ್ತಿದ್ದಂತೆ ಖಾಸಗಿ ಕಂಪನಿಗಳು ಬರುತ್ತವೆ. ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದಕ್ಕೆ ಅವಕಾಶವಿಲ್ಲ ಎಂದಾದರೆ ಪಾಟೀಲ್ ಅಂಥವರು ಜಾಗ ಖಾಲಿ ಮಾಡುವುದು ನಿಶ್ಚಿತ. ಯುವ ಪೀಳಿಗೆಗೆ ಉತ್ತಮ ಅವಕಾಶ ಸಿಗಬೇಕು ಎಂದಾದರೆ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯಬೇಕು. ಕೆಟ್ಟ ಸಂಪ್ರದಾಯಗಳಿಗೆ ಅವಕಾಶವಿಲ್ಲ ಎಂಬ ಸಂದೇಶ ರವಾನೆಯಾಗಬೇಕು. ಜನಪ್ರತಿನಿಧಿಗಳು ಇಂಥ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು. ಕಲ್ಯಾಣ ಕರ್ನಾಟಕದ ಯುವಪೀಳಿಗೆಗೆ ಸಂವಿಧಾನದ ೩೭೧ ಜೆ ವಿಧಿ ಯಂತೆ ವಿಶೇಷ ಅವಕಾಶ ಇರುವುದರಿಂದ ಅದನ್ನು ಬಳಸಿಕೊಳ್ಳಲು ಮುಕ್ತ ಅವಕಾಶವಿದೆ. ವಾಮ ಮಾರ್ಗ ಅಗತ್ಯವಿಲ್ಲ. ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.

Previous articleಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ‌ ಮಳೆ
Next articleಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ NIA ದಾಳಿ