ಪೊಲೀಸ್ ಠಾಣೆಗಳೆಲ್ಲ ಕಾಂಗ್ರೆಸ್ ಕಚೇರಿ ಆಗಿವೆ

0
6

ಹುಬ್ಬಳ್ಳಿ: ಹಿಂದುಗಳ ಪರವಾಗಿ ಮಾತನಾಡುವವರನ್ನು ಮತ್ತು ಬಿಜೆಪಿ ಮುಖಂಡರನ್ನೇ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ನಾಯಕರು, ರಾಜ್ಯದ ಎಲ್ಲ ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂತೆಯೇ ಪೊಲೀಸರೂ ಕೂಡ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಜೆ ಹಳ್ಳಿ-ಡಿಜೆ ಹಳ್ಳಿಯ ಗಲಭೆ, ಹಳೇ ಹುಬ್ಬಳ್ಳಿಯ ಗಲಭೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆ ಸ್ಫೋಟ, ಮೈಸೂರು ಗಲಭೆ ಖುವಾರಿಗಳು ಅಷ್ಟೇ ಅಲ್ಲ ವಿಧಾನ ಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ ನಾಸಿರ್ ಅಹ್ಮದ್ ಅವರನ್ನು ಸರಿಯಾಗಿ ವಿಚಾರಣೆ ಮಾಡದೇ ಬಿಟ್ಟು ಕಳಿಸಲಾಗಿದೆ. ಕಾಂಗ್ರೆಸ್ ನಾಯಕರ ಸೂಚನೆಯಂತೆ ಪೊಲೀಸರೂ ಕುಣಿಯುತ್ತಿದ್ದಾರೆ. ಇದೇ ಕಾರಣಕ್ಕೆ ನ್ಯಾಯಾಲಯ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಕಿಡಿ
ಕಾರಿದರು. ಮುಸಲ್ಮಾನರ ಓಲೈಕೆ ಮಾಡುತ್ತ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಛಲವಾದಿ ನಾರಾಯಣ ಸ್ವಾಮಿ, ಹರೀಶ ಪೂಂಜಾ, ಸಿ.ಟಿ.ರವಿ ಅವರ ವಿರುದ್ಧ ಇಲ್ಲಸಲ್ಲದ ಪ್ರಕರಣ ದಾಖಲು ಮಾಡಲಾಗಿದೆ. ಗೃಹ ಸಚಿವರು ಮಾತ್ರ ಜಾಣ ಮೌನಕ್ಕೆ ಶರಣಾಗಿದ್ದಾರೆ. ಇವರ ಈ ದುರಾಡಳಿತದಿಂದ ಜಿಲ್ಲೆಗೊಬ್ಬರಂತೆ ಗೃಹ ಸಚಿವರು ಹುಟ್ಟಿಕೊಂಡಿದ್ದಾರೆ. ಕಲಬುರ್ಗಿಯಲ್ಲಿ ಪ್ರಿಯಾಂಕ ಖರ್ಗೆ, ದಕ್ಷಿಣ ಕನ್ನಡದಲ್ಲಿ ಯು.ಟಿ. ಖಾದರ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ರಿಪಬ್ಲಿಕ್ ಆಫ್ ಕಲಬುರ್ಗಿ, ರಿಪಬ್ಲಿಕ್ ಆಫ್ ಬೆಳಗಾವಿ ಮಾಡಿಕೊಂಡು ಸ್ವತಃ ಅವರೇ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಪೊಲೀಸರ ಆಡಳಿತ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ವಸೂಲಿಗೆ ಇಳಿದಿದ್ದಾರೆ. ಇದು ಸಂತೋಷ್ ಲಾಡ್ ಅವರಿಗೆ ತಿಳಿದಿದ್ದರೂ ಮೌನವಾಗಿರುವುದೇಕೆ ಎಂದು ಬೆಲ್ಲದ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ದುರಾಡಳಿತ ನೀತಿಯಿಂದ ಜನ ಬೇಸತ್ತಿದ್ದಾರೆ. ಹಿಂದು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು, ನಡು ರಾತ್ರಿ ಅವರ ಮನೆಗೆ ಹೋಗಿ ಭಾವಚಿತ್ರ ತೆಗೆಯುವುದು, ವಿಚಾರಣೆ ನೆಪದಲ್ಲಿ ವಿನಾಕಾರಣ ಠಾಣೆಗೆ ಕರೆಸುವುದು, ಗಡಿಪಾರು ಮಾಡುವುದು ಹಾಗೂ ನೋಟಿಸ್ ನೀಡಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದವರನ್ನು ಟಾರ್ಗೆಟ್ ಮಾಡಿಕೊಂಡು ಹೆದರಿಸಿ-ಬೆದರಿಸಿ ಅವರ ಬಾಯಿ ಮುಚ್ಚಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.

Previous articleಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ
Next articleಕನ್ನಡ ಭಾವುಟ ನೀಡಿ RCB ತಂಡಕ್ಕೆ ಸ್ವಾಗತಿಸಿದ ಡಿ.ಕೆ. ಶಿವಕುಮಾರ್