ರಷ್ಯಾದ ನಿರಂಕುಶ ಪ್ರಭು ಪುಟಿನ್‌ಗೆ ಈಗ ಭಸ್ಮಾಸುರನ ಕಾಟ ಆರಂಭವಾಗಿದೆ. ತನ್ನ ಆಪ್ತನಾಗಿದ್ದ ವ್ಯಾಗ್ನರ್ ಖಾಸಗಿ ಸೇನೆಯ ಯೆವ್ಗಿನಿ ಪ್ರಿಗೋಜಿನ್ ತನ್ನ ವಿರುದ್ಧವೇ ತಿರುಗಿ ಬಿದ್ದಿರುವುದು ಪುಟಿನ್‌ಗೆ ಹಿನ್ನಡೆಯಾಗಿದೆ. ಪ್ರಿಗೋಜಿನ್ ನಿಯಂತ್ರಣಕ್ಕೆ ಈಗ ಪುಟಿನ್ ಮೋಹಿನಿ' ಯನ್ನು ಹುಡುಕುತ್ತಿದ್ದಾರೆ. ಪ್ರಿಗೋಜಿನ್ ಉಕ್ರೇನ್‌ನಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಹೇಳಲಾಗಿದೆ. ರಷ್ಯಾದ ಅಧ್ಯಕ್ಷರಿಗೆ ಆಗಿರುವ ಪರಿಸ್ಥಿತಿ ಚೀನಾದ ಅಧ್ಯಕ್ಷರಿಗೆ ಎಚ್ಚರಿಕೆಯಾಗಿದೆ. ನಿರಂಕುಶ ಆಡಳಿತ ನಡೆಸಲು ಯತ್ನಿಸುವ ಎಲ್ಲರೂ ತಮ್ಮದೇ ಆದ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳುವುದುಂಟು. ತಾವೇ ಸಾಕಿದ ಗಿಳಿ ಹದ್ದಾಗಿ ಬಂದು ಕುಕ್ಕುತ್ತದೆ ಎಂದು ಭಾವಿಸಿರುವುದಿಲ್ಲ. ಇತಿಹಾಸದ ಪುಟಗಳಲ್ಲಿ ಇಂಥ ಘಟನೆಗಳು ದಾಖಲುಗೊಂಡಿದ್ದರೂ ತಮ್ಮ ಆಪ್ತರನ್ನು ಅತಿಯಾಗಿ ನಂಬುವುದು ನಿರಂಕುಶ ಪ್ರಭುಗಳ ದೌರ್ಬಲ್ಯ. ಕಳೆದ ೧೫ ತಿಂಗಳಿನಿಂದ ರಷ್ಯಾ- ಉಕ್ರೇನ್ ಯುದ್ಧ ನಡೆಯುತ್ತಿದ್ದರೂ ಇದಕ್ಕೆ ಅಂತ್ಯ ಇನ್ನೂ ಕಂಡುಬಂದಿಲ್ಲ. ಉಕ್ರೇನ್ ನಾಯಕ ಪುಟಿನ್ ವಿರುದ್ಧ ಮಸಲತ್ತು ನಡೆಸುತ್ತಿದ್ದು ಪ್ರಿಗೋಜಿನ್ ದೊಡ್ಡ ಅಸ್ತ್ರವಾಗಿ ಉಕ್ರೇನ್‌ಗೆ ಲಭಿಸಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಆರಂಭದಲ್ಲಿ ವಿಜಯಶಾಲಿಯಾಗಿತ್ತು. ಅದೇ ವೇಗದಲ್ಲಿ ಹೋಗಿದ್ದರೆ ಉಕ್ರೇನ್ ವಶವಾಗಬೇಕಿತ್ತು. ಆದರೆ ಉಕ್ರೇನ್ ಪರ ನ್ಯಾಟೋ ದೇಶಗಳು ಬೆಂಬಲವಾಗಿ ನಿಂತವು. ಅಲ್ಲದೆ ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ್ದು ದೊಡ್ಡ ಹೊಡೆತ ನೀಡಿತು. ಅದರಲ್ಲೂ ರಷ್ಯಾ ತೈಲವನ್ನು ಖರೀದಿ ಮಾಡಲು ಯಾರೂ ಮುಂದೆ ಬಾರದಿರುವುದು ಕಷ್ಡಕ್ಕೆ ಕಾರಣವಾಯಿತು. ಅದರಿಂದ ಅತ್ಯಂತ ಕಡಿಮೆ ದರದಲ್ಲಿ ಕಚ್ಚಾತೈಲವನ್ನು ಮಾರಬೇಕಾಗಿಬಂದಿತು. ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರ ಬಳಸುವುದಾಗಿ ಬೆದರಿಕೆ ಹಾಕಿದರೂ ಜಾಗತಿಕ ಮಟ್ಟದ ಒತ್ತಡಕ್ಕೆ ರಷ್ಯಾ ಮಣಿಯಬೇಕಾಗಿ ಬಂದಿದೆ. ರಷ್ಯಾಗೆ ಚೀನಾದ ಬೆಂಬಲ ಹೊರತುಪಡಿಸಿದರೆ ಇತರ ಪ್ರಮುಖ ದೇಶದ ಬೆಂಬಲ ಕಂಡು ಬರುತ್ತಿಲ್ಲ. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆಯೇ ಹೊರತು ಯುದ್ಧವನ್ನು ಬೆಂಬಲಿಸಿಲ್ಲ. ಯುದ್ದಕ್ಕೂ ಆರ್ಥಿಕ ಒಪ್ಪಂದಗಳಿಗೂ ಸಂಬಂಧ ಇರಬಾರದು ಎಂಬ ಭಾರತದ ನಿಲುವಿಗೆ ಈಗ ಅಮೆರಿಕ ಸೇರಿದಂತೆ ಎಲ್ಲ ದೇಶಗಳು ಬೆಂಬಲ ವ್ಯಕ್ತಪಡಿಸಿವೆ. ರಷ್ಯಾ ಈಗ ಯುದ್ಧೋನ್ಮಾದದಿಂದ ಹೊರಬಂದು ವಾಸ್ತವ ದೃಷ್ಟಿಯಿಂದ ನೋಡುವುದು ಅನಿವಾರ್ಯವಾಗಿದೆ. ಯೆವ್ಗಿನಿ ಪ್ರಿಗೋಜಿನ್ ತನಗೆ ಅತ್ಯಂತ ಆಪ್ತ ಎಂದು ಪುಟಿನ್ ಭಾವಿಸಿದ್ದು ನಿಜ. ಆತನೇ ಈಗ ಪುಟಿನ್ ವಿರುದ್ಧ ತಿರುಗಿ ನಿಂತಿರುವುದು ಆತಂಕದ ಸಂಗತಿ. ವ್ಯಾಗ್ನರ್ ಖಾಸಗಿ ಸೇನೆ ಇಂದು ನಿನ್ನೆಯದಲ್ಲ. ೨೦೧೪ ರಿಂದಲೂ ಕೆಲಸ ಮಾಡುತ್ತಿದೆ. ಇದಕ್ಕೆ ಪುಟಿನ್ ಅಭಯ ಹಸ್ತ ಇತ್ತು. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಇದು ಕೆಲಸ ಮಾಡುತ್ತಿತ್ತು. ಸಿರಿಯಾ ಮತ್ತು ಲಿಬಿಯಾದಲ್ಲಿ ಈ ಪಡೆಯ ಸೈನಿಕರು ಇದ್ದಾರೆ. ಈಗ ಈ ಪಡೆಯೇ ರಷ್ಯಾ ಸೇನೆಯ ವಿರುದ್ಧ ತಿರುಗಿ ಬಿದ್ದಿದೆ. ರಕ್ಷಣಾ ಇಲಾಖೆ ಸಚಿವರು ಮತ್ತು ಮುಖ್ಯಸ್ಥರ ವಿರುದ್ಧ ಯೆವ್ಗಿನಿ ಪ್ರಿಗೋಜಿನ್ ನೇರ ಆರೋಪ ಮಾಡಿದ್ದಾರೆ. ಪುಟಿನ್ ಇದನ್ನು ಬಂಡಾಯ ಎಂದು ಕರೆದು ಅದನ್ನು ದಮನ ಮಾಡಲಾಗಿದೆ. ಆದರೂ ತೆರೆಮರೆಯಲ್ಲಿ ಸಂಧಾನದ ಪ್ರಯತ್ನಗಳು ನಡೆಯುತ್ತಿವೆ. ಪುಟಿನ್‌ಗೆ ಆದ ಗತಿಯೇ ಚೀನಾದ ಮುಖ್ಯಸ್ಥರಿಗೂ ಬರಲಿದೆ ಎಂದು ರಾಜತಾಂತ್ರಿಕ ತಜ್ಞರು ಹೇಳುತ್ತ್ತಿದ್ದಾರೆ. ಅಲ್ಲೂ ಆಂತರಿಕ ಸಂಘರ್ಷ ಸ್ಫೋಟಗೊಳ್ಳುವ ಹಂತ ತಲುಪುತ್ತಿಲ್ಲ. ಬಹುತೇಕ ದೇಶಗಳಲ್ಲಿ ನಾಯಕರು ತಮ್ಮ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ತಮ್ಮದೇ ಆದ ನಿಷ್ಠಾವಂತರ ಪಡೆಯನ್ನು ಕಟ್ಟುತ್ತಾರೆ. ಅದೇ ಪಡೆಯ ಮುಖ್ಯಸ್ಥರು ಕಾಲಕ್ರಮೇಣ ಭಸ್ಮಾಸುರರಾಗಿ ತನ್ನನ್ನು ಬೆಳೆಸಿದವರನ್ನೇ ನುಂಗಲು ಬಂಡಾಯ ಏಳುತ್ತಾರೆ. ಅವರನ್ನು ದಮನ ಮಾಡಲು ಪುಟಿನ್ ಸೇರಿದಂತೆ ಎಲ್ಲ ನಾಯಕರು
ಮೋಹಿನಿ’ ಯನ್ನು ಹುಡುಕುತ್ತಾರೆ. ಕೆಲವೊಮ್ಮೆ ಮೋಹಿನಿ ಸಿಗದೆ ಬಲಿಯಾಗುವುದುಂಟು.
ಈಗ ರಷ್ಯಾದಲ್ಲಿ ತಲೆ ಎತ್ತಿರುವ ಬಂಡಾಯವನ್ನು ಶಮನ ಮಾಡುವುದು ಕಷ್ಟ. ಎರಡೂ ದೇಶಗಳ ಜನ ಯುದ್ಧದಿಂದ ನೊಂದು ಹೋಗಿದ್ದಾರೆ. ಈಗ ಖಾಸಗಿ ಸೇನೆಯನ್ನು ನಿಯಂತ್ರಿಸಲು ಹೊಸ ಕಾಯ್ದೆಯನ್ನು ಜಾರಿಗೆ ತರಲು ರಷ್ಯಾ ಸಂಸತ್ತು ಹವಣಿಸುತ್ತಿದೆ. ಈಗ ಹೊರಗಿನ ಶಕ್ತಿಗಳು ಪ್ರಿಗೋಜಿನ್‌ಗೆ ಬೆಂಬಲ ನೀಡುವುದರಲ್ಲಿ ಸಂದೇಹವಿಲ್ಲ. ಪುಟಿನ್ ಈಗ ನಿಜವಾಗಿಯೂ ದ್ವಂದ್ವದಲ್ಲಿ ಸಿಲುಕಿದ್ದಾರೆ. ಇದರಿಂದ ಪಾರಾಗಲು ಪುಟಿನ್ ಬೇರೆ ತಂತ್ರವನ್ನು ಅನುಸರಿಸುವುದು ಅನಿವಾರ್ಯ. ಯುದ್ಧದಿಂದ ಗೆಲುವು ಸಾಧಿಸುವುದು ಕಷ್ಟ ಎಂಬುದು ಪುಟಿನ್ ಅರಿವಿಗೆ ಬಂದಿದೆ. ಆದರೆ ಮಾತುಕತೆ ಯಾವ ರೀತಿ ಹಾಗೂ ಯಾರ ಮೂಲಕ ನಡೆಸಬೇಕೆಂಬುದು ತೀರ್ಮಾನವಾಗಬೇಕು. ಉಕ್ರೇನ್ ಜನ ಎಲ್ಲವನ್ನೂ ಕಳೆದುಕೊಂಡು ಹತಾಶರಾಗಿದ್ದಾರೆ. ಅವರ ನೆರವಿಗೆ ಬರುವವರು ಯಾರು ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ವಿಶ್ವದಲ್ಲಿ ಇದುವರೆಗೆ ನಡೆದ ಎಲ್ಲ ಯುದ್ಧಗಳಲ್ಲಿ ಸೋಲು- ಗೆಲುವು ಎಂಬುದು ಇಲ್ಲವೇ ಇಲ್ಲ. ಸೋತವರು ಮತ್ತು ಗೆದ್ದವರು ಇಬ್ಬರೂ ಸಮಾನವಾಗಿ ನೊಂದವರು. ಸ್ನೇಹ ಸೇತುವೆ ಮೂಲಕ ಮತ್ತೆ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಈ ವಿಷಯದಲ್ಲಿ ಭಾರತ ನೀಡಿದ್ದ ಸಲಹೆಯನ್ನು ಎರಡೂ ದೇಶಗಳು ಸ್ವೀಕರಿಸಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಎಲ್ಲವನ್ನು ಕಳೆದುಕೊಂಡ ಮೇಲೆ ಜ್ಞಾನೋದಯದ ಬೆಳಕು ಮೂಡುವ ಲಕ್ಷಣ ಕಂಡು ಬರುತ್ತಿದೆ.