ಬೆಳಗಾವಿ: ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ಶಿಫಾರಸ್ಸು ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ಪಿಎಸ್‌ಐ ಅನ್ನಪೂರ್ಣ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ನಾನು ಓರ್ವ ಸಚಿವೆಯಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಇಂಥ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು, ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯಸಿಗಬೇಕು. ಅನ್ನಪೂರ್ಣ ಅವರ ಕಾರ್ಯ ಇತರ ಅಧಿಕಾರಿಗಳಿಗೆ ದಾರಿ ದೀಪವಾಗಬೇಕು. ಸರ್ಕಾರಿ ನೌಕರರಿಗೆ ನಮ್ಮ ಇಲಾಖೆಯಿಂದ ಕೊಡ ಮಾಡುವ ರಾಣಿ ಚನ್ನಮ್ಮ ಪ್ರಶಸ್ತಿ ನೀಡಲು ಬರುವುದಿಲ್ಲ. ಒಂದು ವೇಳೆ ಸರ್ಕಾರಿ ನೌಕರರಿಗೆ ಕೊಡಬಹುದೆಂದು ಬಂದರೆ ಅನ್ನಪೂರ್ಣ ಅವರ ಹೆಸರು ಮೊದಲಿರುತ್ತದೆ ಎಂದು ಉತ್ತರಿಸಿದರು.
ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ನಮ್ಮನ್ನು ಟೀಕಿಸುವ ಬದಲಿಗೆ ಬಿಜೆಪಿಗರು ಮಣಿಪುರಕ್ಕೆ ಒಮ್ಮೆ ಭೇಟಿ ನೀಡಲಿ, ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಅಲ್ಲಿಗೆ ಭೇಟಿ ಕೊಟ್ಟಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.