ಚರಂಡಿ ಮೇಲೆ ಹಾಕಿದ ಕಲ್ಲು ತಂದು ಜರ್ಮನ್ ಮಾದರಿ ಅಂತ ಹೇಳ್ತೀರಾ…
ದಾವಣಗೆರೆ: ಮೇಯರ್ ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬಜೆಟ್ ಸಭೆಯಲ್ಲಿ ಬಿಜೆಪಿ ನಾಯಕ ಪ್ರಸನ್ನಕುಮಾರ್ ಹಾಗಲ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರ ಎಂದು ಟೀಕಿಸಿದ್ದಕ್ಕೆ ಬಜೆಟ್ ಸಭೆ ಹಠಾತ್ ರದ್ದಾದ ಘಟನೆ ನಡೆಯಿತು.
ಶಿವಪ್ಪಯ್ಯ ವೃತ್ತವನ್ನು ಜರ್ಮನ್ ಮಾದರಿಯಲ್ಲಿ ಅಭಿವೃದ್ದಿ ಮಾಡುವ ಕುರಿತು ಚರ್ಚೆ ನಡೆಯುತ್ತಿರುವಾಗ ಪ್ರಸನ್ನಕುಮಾರ್, ಜರ್ಮನ್ ಮಾದರಿ ಅಂತ ಹೇಳಿ ಯಾವುದೋ ಚರಂಡಿ ಮೇಲೆ ಹಾಕಿದ ಕಲ್ಲು ತಂದು ಜರ್ಮನ್ ಮಾದರಿ ಅಂತ ಹೇಳ್ತೀರಾ ಅಂದ್ರು. ಆಗ ಆಡಳಿತ ಪಕ್ಷದ ನಾಗರಾಜ್, ಗಡಿ ಗುಡಾಳು ಮಂಜುನಾಥ್, ಕಾಮಗಾರಿ ಪೂರ್ಣ ಮಾಡದೇ ಈ ರೀತಿ ಟೀಕೆ ಬೇಡ ಎಂದರು. ಆಗ ಪ್ರಸನ್ನ ಕುಮಾರ್, ನೀವು ಯಾಕೋ ವೃತ್ತದ ವಿಷಯ ಮಾತನಾಡುತ್ತಲೇ ಕೆರಳುತ್ತೀರ. ಕಳ್ಳನ ತರಹ ಆಡ್ತೀರ… ಎಂದರು. ಆಗ ಕಾಂಗ್ರೆಸ್ ಸದಸ್ಯರು ಮೇಯರ್ ಮುಂದೆ ಬಂದು ಧಿಕ್ಕಾರ ಕೂಗಿ, ಪ್ರತಿಭಟಿಸಿದರು. ಈ ವೇಳೆ ಸಾಕಷ್ಟು ಗೊಂದಲ ಸೃಷ್ಟಿ ಆಯಿತು. ಕೊನೆಗೆ ಸಭೆ ಬರಕಾಸ್ತು ಮಾಡಲಾಯಿತು.