ಘಟಪ್ರಭಾ: ಪಕ್ಕದ ಮನೆಯ ಯುವಕನ ಪ್ರೀತಿಯ ಕಾಟಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಭಾನುವಾರ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಪಾಮಲದಿನ್ನಿ ಗ್ರಾಮದ ಪಾಗಲ್ ಪ್ರೇಮಿ ಸಿದ್ದಲಿಂಗ ಪೂಜೇರಿ(೨೧) ಈತನನ್ನು ಘಟಪ್ರಭಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪರೀಕ್ಷೆ ತಯಾರಿಯಲ್ಲಿದ್ದಳು. ಭಾನುವಾರ ಶಾಲೆಗೆ ಹೋಗಿ ಅಭ್ಯಾಸ ಮಾಡಿಕೊಂಡು ಮಧ್ಯಾಹ್ನ ೨ಕ್ಕೆ ಮನೆಗೆ ಬಂದಿದ್ದು ಸಂಜೆ ಸಮಯ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆಂದು ತಿಳಿದು ಬಂದಿದೆ.
ಪಾಗಲ್ ಪ್ರೇಮಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.