ಪಹಲ್ಗಾಮ್‌ನಲ್ಲಿ ಕೆಲವು ಉಗ್ರವಾದಿಗಳು 26 ಜನರನ್ನು ಕೊಂದು ಓಡಿ ಹೋದರು. ಅದರ ಬಿಸಿ ಈಗ ಭಾರತದಲ್ಲಿರುವ ಪಾಕ್ ಜನರಿಗೆ ತಟ್ಟತೊಡಗಿದೆ. ಕಳೆದ 30 ವರ್ಷಗಳಿಂದ ಇಲ್ಲೇ ವಾಸವಿರುವ ಪಾಕ್ ಪ್ರಜೆಗಳು ಈಗ ಭಾರತ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ೪ ದಿನಗಳಲ್ಲಿ ೫೩೭ ಜನ ಗಡಿದಾಟಿದ್ದಾರೆ. ಇನ್ನೂ ಕೆಲವರು ಹೋಗುವುದೋ ಬಿಡುವುದೋ ಎಂಬ ದ್ವಂದ್ವದಲ್ಲಿದ್ದಾರೆ. ಇಲ್ಲೇ ಇದ್ದರೆ ೩ವರ್ಷ ಜೈಲು ೩ ಲಕ್ಷ ರೂ. ದಂಡ ತೆರಬೇಕು. ಭಾರತ- ಪಾಕ್ ನಡುವೆ ೩೮೮೬ ಕೋಟಿ ರೂ. ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಈಗ ಅದಕ್ಕೆ ಕತ್ತರಿ ಬಿದ್ದಿದೆ. ಇದಲ್ಲದೆ ೫ ಲಕ್ಷ ಮಹಿಳೆಯರು ಭಾರತೀಯರನ್ನು ಮದುವೆಯಾಗಿದ್ದಾರೆ. ಉತ್ತರಪ್ರದೇಶ ೧೮೦೦, ತೆಲಂಗಾಣ ೨೦೮, ಕೇರಳ ೧೦೪, ಮಧ್ಯಪ್ರದೇಶ ೨೨೮, ರಾಜಾಸ್ತಾನದಲ್ಲಿ ೨೦ ಸಾವಿರ ಜನ ಇದ್ದಾರೆ. ಇದಲ್ಲದೆ ಪಾಕ್ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಬಿಟ್ಟು ತೆರಳಬೇಕು. ವೈದ್ಯಕೀಯ ಚಿಕಿತ್ಸೆಗಾಗಿ ಬಂದವರ ಪಾಡು ಹೇಳತೀರದು. ಕರ್ನಾಟಕದಲ್ಲಿ ಒಟ್ಟು ೧೦೮ ಜನರನ್ನು ಗುರುತಿಸಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲೇ ೪೦ ಜನ ಇದ್ದರೆ, ೧೪ ಜನ ಭಟ್ಕಳದಲ್ಲಿ ಇಲ್ಲೇ ಮದುವೆಯಾಗಿ ನೆಲೆಸಿದ್ದಾರೆ. ಅವರು ದೀರ್ಘ ಆವಧಿವೀಸಾ ಹೊಂದಿರುವುದರಿಂದ ಅವರಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ. ಆದರೆ ಅವರು ಪಾಕಿಸ್ತಾನದವರು ಎಂದು ಜನ ಗುರುತಿಸಿದ ಕೂಡಲೇ ಅವರು ಇಲ್ಲಿ ಬದುಕುವುದೂ ಕಷ್ಟ.
ಭಯೋತ್ಪಾದಕರು ಹುಡುಕಿ ಹುಡುಕಿ ಪುರುಷರನ್ನು ಮಹಿಳೆಯರು ಮತ್ತು ಮಕ್ಕಳ ಮುಂದೆ ಕೊಂದಿದ್ದು ಪಾಕ್ ಪ್ರಜೆಗಳ ಬಗ್ಗೆ ಇದ್ದ ಅನುಕಂಪ ಮಾಯವಾಗಿದೆ. ಅವರನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕಬೇಕೆಂಬ ಕೂಗು ಕೇಳಿ ಬಂದಿದೆ. ಇದುವರೆಗೆ ಇಂಥ ಕೂಗು ಕೇಳಿಬಂದಿರಲಿಲ್ಲ. ಉಗ್ರ ಸಂಘಟನೆಯಲ್ಲಿ ಸೇರಿದ್ದ ೧೩ ಜನರನ್ನು ಪರಪ್ಪನ ಅಗ್ರಹಾರದ ಜೈಲು ಮತ್ತು ಬೆಳಗಾವಿ ಜೈಲಿನಲ್ಲಿಡಲಾಗಿದೆ.
ಇಂಥ ಪರಿಸ್ಥಿತಿ ಸೃಷ್ಟಿಯಾಗಲು ಕಾರಣ ಯಾರು ಎಂದು ಕೇಳಿದರೆ ಇಡೀ ಜಗತ್ತಿನ ಬೆರಳು ಪಾಕಿಸ್ತಾನದ ಕಡೆ ತಿರುಗುವುದು ನಿಶ್ಚಿತ. ಭಾರತದಲ್ಲಿರುವ ಪಾಕ್ ಪ್ರಜೆಗಳ ಬಗ್ಗೆ ಕಿಂಚಿತ್ ಕಾಳಜಿ ಇದ್ದಲ್ಲಿ ಪಾಕ್ ನಾಯಕರು ಕೂಡಲೇ ಉಗ್ರರೊಂದಿಗೆ ಇರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ತಮ್ಮ ದೇಶದೊಳಗೆ ಇರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರರೆಂದು ಪಟ್ಟಿಯಾಗಿರುವವರನ್ನು ಗಡಿಪಾರು ಮಾಡಬೇಕು. ಈಗ ಅಮೆರಿಕ ಮುಂಬೈ ದಾಳಿಗೆ ಸಂಬಂಧಿಸಿದಂತೆ ರಾಣಾನನ್ನು ಭಾರತಕ್ಕೆ ಒಪ್ಪಿಸಿದಂತೆ ಉಳಿದವರನ್ನು ಒಪ್ಪಿಸಿದರೆ ಆಗ ಭಾರತದಲ್ಲಿರುವ ಪಾಕ್ ಪ್ರಜೆಗಳು ನೆಮ್ಮದಿಯಿಂದ ಬದುಕಬಹುದು. ಪಾಕ್ ಪ್ರಧಾನಿಯಿಂದ ಹಿಡಿದು ಎಲ್ಲ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಯುದ್ಧ ನಡೆಸುವುದು ಸುಲಭದ ಕೆಲಸವಲ್ಲ. ಈಗಲೇ ಸೋತು ಸುಣ್ಣವಾಗಿರುವ ಪಾಕ್‌ಗೆ ಇನ್ನಾದರೂ ವಿವೇಕ ಮೂಡುವುದು ಅಗತ್ಯ. ಭಾರತವನ್ನೂ ಯಾವ ರೀತಿಯಲ್ಲೂ ಅದು ಸೋಲಿಸಲು ಸಾಧ್ಯವಿಲ್ಲ ಎಂಬುದು ಜಗಜ್ಜಾಹೀರ. ಅದರ ಬದಲು ಸ್ನೇಹ ಬೆಳೆಸಿದರೆ ಎರಡೂ ದೇಶಗಳ ಜನರಿಗೆ ನೆಮ್ಮದಿ. ನಿಸರ್ಗ ಎರಡೂ ದೇಶಗಳು ಹಂಚಿಕೊಂಡು ಬದುಕುವುದಕ್ಕೆ ಬೇಕಾಗುವ ನೈಸರ್ಗಿಕ ಸಂಪತ್ತು ನೀಡಿದೆ. ಮದ್ದು ಗುಂಡು ನಮ್ಮ ಬಳಿಯೂ ಇದೆ ಎಂದು ಹೇಳಿದರೆ ಅದನ್ನೇ ತಿಂದು ಬದುಕಲು ಸಾಧ್ಯವಿಲ್ಲ. ಆಫ್ಘಾನಿಸ್ತಾನ ಯಾವ ಸ್ಥಿತಿಯಲ್ಲಿದೆ ಎಂಬುದು ಪಾಕ್‌ಗೆ ತಿಳಿಯದ ಸಂಗತಿ ಏನಲ್ಲ.
ಭಾರತ ಎಂದೂ ಪಾಕ್‌ಗೆ ಕೇಡು ಬಯಸುವುದಿಲ್ಲ. ಇದು ಇಡೀ ಜಗತ್ತಿಗೆ ಗೊತ್ತು. ಅಲ್ಲದೆ ಉಗ್ರವಾದಿಗಳಿಗೆ ಈಗ ಎಲ್ಲೂ ಆಶ್ರಯ ಸಿಗುತ್ತಿಲ್ಲ. ಅವರಿಗೆ ಬೇಕಿರುವುದು ಹಿಂಸೆ, ಪಾಕ್ ಜನರ ನೆಮ್ಮದಿ ಅಲ್ಲ. ಈಗ ಎರಡೂ ದೇಶಗಳು ಪ್ರತಿಷ್ಠೆಗೆ ಇಳಿದಲ್ಲಿ ಎರಡೂ ಕಡೆ ವಾಸಿಸುತ್ತಿರುವ ಜನರ ಗತಿ ಏನು? ಎಷ್ಟು ಜನರ ಸ್ಥಳಾಂತರ ಸಾಧ್ಯ? ೧೯೪೭ರ ವಿಭಜನೆಯಿಂದ ಆದ ಸಾವು-ನೋವಿನಿಂದ ಹೊರ ಬರಲು ೭೦ ವರ್ಷ ಬೇಕಾಯಿತು. ಈಗ ಮತ್ತೆ ಜನರ ವಿಭಜನೆ ಎಂದರೆ ಸಾವು-ನೋವನ್ನು ನಾವೇ ಆಹ್ವಾನಿಸಿಕೊಂಡಂತೆ. ಹಲವು ವರ್ಷಗಳಿಂದ ಒಂದು ದೇಶ, ಪ್ರದೇಶಕ್ಕೆ ಹೊಂದಿಕೊಂಡು ಬದುಕುತ್ತಿರುವ ಜನರನ್ನು ಎತ್ತಂಗಡಿ ಮಾಡುವುದು ಸುಲಭದ ಕೆಲಸವಲ್ಲ. ಇದನ್ನು ಮೊದಲು ಪಾಕ್ ನಾಯಕರು ಅರಿತುಕೊಳ್ಳಬೇಕು. ಈಗ ಭಾರತ ಕಾಶ್ಮೀರವನ್ನು ವಿಭಜಿಸಿ ಆರ್ಥಿಕವಾಗಿ ಉತ್ತಮಪಡಿಸಿದೆ. ಅಲ್ಲಿಯ ಜನ ನೆಮ್ಮದಿಯ ಬದುಕನ್ನು ಕಾಣುವ ಸಮಯದಲ್ಲಿ ಅದಕ್ಕೆ ಕಲ್ಲು ಹಾಕುವುದು ಸರಿಯಲ್ಲ. ಕಾಶ್ಮೀರದ ಜನರೇ ಉಗ್ರರನ್ನು ಹೊಡೆದು ಓಡಿಸುವ ಕಾಲ ಬರಲಿದೆ.
ಕೇಂದ್ರ ಸರ್ಕಾರ ಕೂಡ ಎಲ್ಲ ಪಾಕ್ ಪ್ರಜೆಗಳನ್ನು ದೇಶ ಬಿಡಿ ಎಂದು ಹೇಳಿರುವುದು ಕಷ್ಟಸಾಧ್ಯದ ಕೆಲಸ ಎಂಬುದನ್ನು ಪುನರಾವಲೋಕನ ಮಾಡುವುದು ಸೂಕ್ತ. ಅವರಿಗೂ ಉಗ್ರರಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಅಲ್ಲದೆ ಪಾಕ್ ನಾಯಕರು ಕೈಗೊಂಡ ತೀರ್ಮಾನಗಳಿಗೆ ಇವರನ್ನು ಬಲಿಪಶು ಮಾಡಬೇಕೆ? ಪಾಕ್ ನಾಯಕರಿಗೆ ಬುದ್ಧಿ ಕಲಿಸಲು ಬೇರೆ ಮಾರ್ಗ ಇಲ್ಲವೆ ಎಂದು ಚಿಂತಿಸುವ ಕಾಲ ಬಂದಿದೆ.