ಇಳಕಲ್ : ಪ್ರವಾಸಿ ಕೇಂದ್ರದ ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ದುರಂತ ಮತ್ತು ಸಿಇಟಿ ಪರೀಕ್ಷೆ ಸಮಯದಲ್ಲಿ ವಿವಾದಕ್ಕೊಳಗಾದ ಜನಿವಾರದ ಸಮಸ್ಯೆಗಾಗಿ ಇಲ್ಲಿನ ಹಲವಾರು ಸಮಾಜದ ಬಾಂಧವರು ಶುಕ್ರವಾರದಂದು ಮುಂಜಾನೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬ್ರಾಹ್ಮಣ ಸಮಾಜದ ವತಿಯಿಂದ ಸಂಘಟನೆ ಮಾಡಲಾಗಿದ್ದ ಈ ಪ್ರತಿಭಟನೆಯಲ್ಲಿ ಪದ್ಮಶಾಲಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಗುರಂ, ಮಹೇಶ್ವರಿ ಸಮಾಜದ ಅಧ್ಯಕ್ಷ ಶ್ಯಾಮಸುಂದರ ಡಾಗಾ, ಸ್ವಕುಳಸಾಳಿ ಸಮಾಜದ ನಾರಾಯಣಪ್ಪ ದಿವಟೆ, ದೇವಾಂಗ ಸಮಾಜದ ಪಂಪಣ್ಣ ಕಾಳಗಿ, ವಿಶ್ವಕರ್ಮ ಸಮಾಜದ ರಾಮಣ್ಣ ಮರೋಳ ,ತೋಗಟವೀರ ಕ್ಷತ್ರೀಯ ಸಮಾಜದ ನಾರಾಯಣ ಕಂದಿಕೊಂಡ, ಮರಾಠಾ ಕ್ಷತ್ರೀಯ ಸಮಾಜದ ನಾಗರಾಜ ಕೋರೆನ್ನವರ ಸೇರಿದಂತೆ ಆಯಾ ಸಮಾಜಗಳ ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಎಲ್ಲರೂ ಸೇರಿಕೊಂಡು ತಹಸೀಲ್ದಾರ ಕಚೇರಿಗೆ ತೆರಳಿ ಅಲ್ಲಿ ಮನವಿಪತ್ರವನ್ನು ತಹಸೀಲ್ದಾರ ಸತೀಶ ಕೂಡಲಗಿ ಅವರಿಗೆ ಅರ್ಪಿಸಿದರು. ಮನವಿಪತ್ರವನ್ನು ಬ್ರಾಹ್ಮಣ ಸಮಾಜದ ಬಂಡು ಕಟ್ಟಿ ಓದಿದರು. ಶೃಂಗೇರಿ ಶಾರದಾ ಪೀಠದ ಉತ್ತರ ಕರ್ನಾಟಕ ಪ್ರತಿನಿಧಿ ಟಿ ಎಚ್ ಕುಲಕರ್ಣಿ, ಬ್ರಾಹ್ಮಣ ಮಹಾಸಭಾದ ಬಾಗಲಕೋಟ ಜಿಲ್ಲಾ ಪ್ರತಿನಿಧಿ ಗುರುರಾಜ ಗೊಂಬಿ ಮತ್ತಿತರ ಪ್ರಮುಖರು ಮೆರವಣಿಗೆ ನೇತೃತ್ವವನ್ನು ವಹಿಸಿದ್ದರು.