ಪಹಣಿಯಲ್ಲಿ ರೈತರ ಹೆಸರನ್ನು ಹಾಕಲಿ: ಇಲ್ಲದಿದ್ದರೆ ವಿಧಾನಸೌಧದ ಮುಂದೆ ಧರಣಿ

ಬೆಂಗಳೂರು: ಪಹಣಿಯಲ್ಲಿ ರೈತರ ಹೆಸರನ್ನು ಹಾಕಲಿ ಇಲ್ಲದಿದ್ದರೆ ವಿಧಾನಸೌಧದ ಮುಂದೆ ಧರಣಿ ಕೂರುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪಹಣಿಯಲ್ಲಿ ಭೂಮಾಲೀಕರ ಹೆಸರಿನ ಬದಲಾಗಿ ʼಸರ್ಕಾರʼ ಎಂದು ನಮೂದಿಸಿರುವುದು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ರೈತರ, ಭೂಮಾಲೀಕರ ಭೂಮಿಯನ್ನು ಅಕ್ರಮವಾಗಿ ವಕ್ಫ್ ಆಸ್ತಿ ಎಂದು ಪ್ರತಿಭಟಿಸಿದ ನಂತರ ಸರ್ಕಾರ ರೈತರ, ದೇವಸ್ಥಾನಗಳ, ಮಠಗಳ, ಸರ್ಕಾರಿ ಭೂಮಿಯ ಆಸ್ತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿತು.

ಆದರೆ, ಈಗ ಪಹಣಿಯಲ್ಲಿ ಭೂಮಾಲೀಕರ ಹೆಸರನ್ನು ಹಾಕುವ ಬದಲಾಗಿ ‘ಸರ್ಕಾರ; ಎಂದು ನಮೂದಿಸಿರುವುದು ಮತ್ತೊಮ್ಮೆ ಗೊಂದಲ ಸೃಷ್ಟಿಸಿದೆ. ರೈತರ, ಭೂಮಾಲೀಕರ ಜಮೀನನ್ನು ರಕ್ಷಿಸಬೇಕಾಗಿರುವ ಸರ್ಕಾರವೇ ರಾಜಕೀಯ ಒತ್ತಡಕ್ಕೆ ಮಣಿದು ಅನ್ಯಾಯವೆಸಗುತ್ತಿರುವುದು ಅಕ್ಷಮ್ಯ.

ಆಸ್ತಿ ರೈತರದ್ದು, ಭೂಮಾಲೀಕರದ್ದಾದರೆ ಅವರ ಹೆಸರನ್ನು ಹಾಕಬೇಕೆ ಹೊರತು ಸರ್ಕಾರ ಎಂದು ನಮೂದು ಮಾಡುವ ಅವಶ್ಯ ಏನಿತ್ತು ? ಅಲ್ಪ ಸಂಖ್ಯಾ ವೋಟ್ ಬ್ಯಾಂಕ್ ರಕ್ಷಣೆಗೆ ಸರ್ಕಾರ ಮತ್ತೊಂದು ಕಪಟ ನಾಟಕ ಪ್ರಾರಂಭಿಸಿದೆ.

ಕಾನೂನು ರೀತ್ಯ ರೈತರ ಹೆಸರನ್ನು ಪಹಣಿಯಲ್ಲಿ ನಮೂದಿಸಬೇಕೇ ಹೊರತು ಸರ್ಕಾರ ಎಂದು ಹಾಕಬಾರದು. ಸರ್ಕಾರ ತನ್ನ ತಪ್ಪನ್ನು ಇನ್ನರೆಡು ದಿನಗಳಲ್ಲಿ ತಿದ್ದುಕೊಂಡು ಪಹಣಿಯಲ್ಲಿ ರೈತರ ಹೆಸರನ್ನು ಹಾಕಲಿ. ಇಲ್ಲದಿದ್ದರೆ, ರೈತರು ಮತ್ತು ಭೂಮಾಲೀಕರ ಜೊತೆ ವಿಧಾನಸೌಧದ ಮುಂದೆ ಧರಣಿ ಕೂರುತ್ತೇನೆ ಎಂದಿದ್ದಾರೆ.