ಚಂದ್ರಶೇಖರ ಕೊಟಗಿ
ನವಲಗುಂದ: ಉತ್ತರ ಕರ್ನಾಟದ ಭಾಗದಲ್ಲಿಯೇ ಹೆಚ್ಚು ಭಕ್ತ ಸಮೂಹ ಹೊಂದಿದ ಧಾರ್ಮಿಕ ಕ್ಷೇತ್ರಗಳಲ್ಲಿ ತಾಲೂಕಿನ `ಯಮನೂರಿನ ಚಾಂಗದೇವರ ಮಹಾರಾಜರ ಕ್ಷೇತ್ರ’ವು ಒಂದಾಗಿದೆ.
ಈ ಕ್ಷೇತ್ರದಲ್ಲಿ ಚಾಂಗದೇವರಿಗೆ ಪೂಜಾರಿಗಳಿಂದ ಪೂಜೆ, ಪೀರಾಗಳಿಂದ ಓದಿಕೆ (ಪಾತೀಹಾ) ಏಕಕಾಲಕ್ಕೆ ನಡೆಯುವುದರಿಂದ ಹಿಂದು-ಮುಸ್ಲಿಂ ಭಾವೈಕತೆಯ ಸಂದೇಶ ಸಾರುವ ಕ್ಷೇತ್ರವಾಗಿ ಯಮನೂರು ಪ್ರಸಿದ್ಧವಾಗಿದೆ. ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಬೆಣ್ಣಿ ಹಳ್ಳದ ದಡದಲ್ಲಿ ಮಿಂದು, ಚಾಂಗದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಹೋಳಿ ಹುಣ್ಣಿಮೆ ಬಳಿಕ ಮಾರ್ಚ್ 18ರಿಂದ ಯಮನೂರಿನಲ್ಲಿ ಒಂದು ತಿಂಗಳ ಕಾಲ ಚಾಂಗದೇವರ ಜಾತ್ರಾ ಮಹೋತ್ಸವ ಜರುಗಲಿದ್ದು, ರಾಜ್ಯ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.
ಹಿನ್ನೆಲೆ…
ನವಲಗುಂದ ತಾಲೂಕಿನ ಯಮನೂರ ಗ್ರಾಮದ ಆರಾಧ್ಯದೈವ ಚಾಂಗದೇವ ಮಹಾರಾಜರು ಮುಪ್ಪು-ಸಾವನ್ನೂ ಮೀರಿ ೧,೪೦೦ ವರ್ಷಗಳ ಕಾಲ ಬದುಕನ್ನು ಸವೆಸುತ್ತಿದ್ದಾಗ ವಿಠೋಬ ದೇವರು ಯಾಕಪ್ಪ ವ್ಯರ್ಥ ಕಾಲಹರಣಕ್ಕೆ ಮಾಡುತ್ತಿದ್ದಿಯಾ ಎಂದು ಸ್ವಪ್ನ ಸಂದೇಶ ನೀಡಿದರಂತೆ. ಆಗ ಮಾಹಾರಾಷ್ಟ್ರದ ಮಹಿಮಾ ಪುರುಷ ಸಂತಶ್ರೇಷ್ಠ ಜ್ಞಾನ ದೇವರಿಂದ ದೀಕ್ಷೆ ಪಡೆದರಂತೆ. ಧರ್ಮೋದ್ಧಾರಕ್ಕೆ ಮತ್ತು ಭಕ್ತರ ಪರಿಪಾಲನೆಗೆ ಮುಂದಾಗಿ ಮಹಾರಾಷ್ಟç ಕ್ಷೇತ್ರೋಜಿರಾವ್ ಬರ್ಗೆ ಶಿಷ್ಯನೊಂದಿಗೆ ಚಾಂಗದೇವರು ಯಮನೂರ ಗ್ರಾಮಕ್ಕೆ ಆಗಮಿಸಿ ಅಲ್ಲಿ ನರಸಿಂಹ ಸಾಲಿಗ್ರಾಮವನ್ನು ಪ್ರತಿಷ್ಠಾಪಿಸಿ ಅಲ್ಲಿಯೇ ನೆಲೆ ನಿಂತಿದ್ದಾರೆ.
ಗುರುವಿನ ಆಜ್ಞೆಯಂತೆ ಕ್ಷೇತ್ರೋಜಿರಾವ್ ಬರ್ಗೆ ಸಾಲಿಗ್ರಾಮಕ್ಕೆ ತನ್ನ ಬೆರಳಿನ ಐದು ಹನಿ ರಕ್ತದಿಂದ ಪೂಜೆಸುತ್ತಿದ್ದ. ಮುಂದಿನ ಪೀಳಿಗೆ ಆ ಸಾಲಿಗ್ರಾಮಕ್ಕೆ ರಕ್ತದಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಾಲಿಗ್ರಾಮವನ್ನು ಮುಚ್ಚಿಸಿ ಗದ್ದುಗೆ ರೂಪ ನೀಡಿದ್ದನಂತೆ. ಅಂದಿನಿಂದ ಇಂದಿಗೂ ಇಲ್ಲಿ ಬರ್ಗೆ ಮನೆತನದವರೇ ಈ ಕ್ಷೇತ್ರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೋಗ ನಿವಾರಕ ಬೆಣ್ಣಿ ಹಳ್ಳದ ನೀರು
ಯಮನೂರ ಗ್ರಾಮದ ಹತ್ತಿರ ಹರಿಯುವ ಬೆಣ್ಣಿ ಹಳ್ಳದ ನೀರು ಚರ್ಮ ರೋಗನಿವಾರಕವಾಗಿದೆ ಎಂದು ಜಾತ್ರೆಗೆ ಆಗಮಿಸುವ ಭಕ್ತರು ಹಳ್ಳದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಜೊತೆಗೆ ತಮ್ಮ-ತಮ್ಮ ಕುಟುಂಬದವರಿಗೆ ಹಳ್ಳದ ನೀರನ್ನು ಬಾಟಲಿಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಈ ಜಾತ್ರೆಗೆ ಬರುತ್ತಾರೆ. ಈ ಜಾತ್ರೆ ಧರ್ಮ-ದೈವ-ಭಕ್ತಿ-ಶ್ರದ್ಧೆಗಳ ಕೇಂದ್ರವಾಗಿ ಅಪೂರ್ವ ಸಂಗಮವಾಗಿ ನಾಡಿನಲ್ಲೇ ವಿಶಿಷ್ಟವೆನಿಸಿದೆ.
18ರಂದು ಗಂಧಾಭಿಷೇಕ
ಗಂಧಾಭಿಷೇಕ ನಿಮಿತ್ತ ಮಾರ್ಚ್ ೧೮ ರಂದು ಬೆಳ್ಳಿಗೆ ೧೦ಕ್ಕೆ ಬರ್ಗೆ ಮನೆತನದ ಸಂತರು ಚಾಂಗದೇವ ಮಹಾರಾಜರ ದರ್ಗಾದಿಂದ ಬೆಣ್ಣಿ ಹಳ್ಳದವರೆಗೆ (೧.೫ಕಿ.ಮೀ) ಪಾದಯಾತ್ರೆ ಮೂಲಕ ತೆರಳಿ ಬೆಣ್ಣಿಹಳ್ಳದ ನೀರಿನಿಂದ ದೀಪ ಹಚ್ಚುತ್ತಾರೆ. ಪೀರಾಗಳು ಓದಿಕೆ ಪಠಿಸಿದರೆ, ಪೂಜಾರಿಗಳು ಮಂತ್ರ ಪಠಣ ಮಾಡುತ್ತಾರೆ. ಹೀಗಾಗಿ ಹಿಂದು-ಮುಸ್ಲಿಂರ ಭಾವೈಕ್ಯತೆ ಸಂದೇಶ ನೀಡಲಿರುವ ಯಮನೂರ ಜಾತ್ರೆ ಮತ್ತೊಮ್ಮೆ ಸಾಕ್ಷಿಯಾಗಲಿದೆ.
19ರಂದು ಉರುಸು…
ಯಮನೂರ ಗ್ರಾಮದ ಚಾಂಗದೇವ(ರಾಜಾಬಾಗ ಸವಾರ) ಮಹಾರಾಜರ ಜಾತ್ರಾ ಮಹೋತ್ಸವ ಮಾರ್ಚ್ 17ರಿಂದ ಒಂದು ತಿಂಗಳ ಕಾಲ ನಡೆಲಿದ್ದು, 18ರಂದು ಗಂಧಾಭಿಷೇಕ(ಸಂದಲ್), ಮಾರ್ಚ್ 19ರಂದು ಪುಣ್ಯತಿಥಿ (ಉರುಸು) ಜರುಗಲಿದೆ.