ಬೆಂಗಳೂರು: ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿದ್ದು ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ವಿಪರ್ಯಾಸ.
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ, ಅನಿಯಮಿತ ಅವಾಂತರಗಳಿಗೆ ಸಾಕ್ಷಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಪ್ರಸ್ತುತ ಕೇವಲ 34 ಅಭ್ಯರ್ಥಿಗಳಿಗೆ ಮಾತ್ರ ಮೇ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸಾವಿರಾರು, ಬಡ, ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಲ್ಲಿ ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.