ಪರವಾನಿಗೆ ಇಲ್ಲದ ಗೃಹ – ವಾಣಿಜ್ಯ ಕಟ್ಟಡಗಳಿಗೆ ಎ ಹಾಗೂ ಬಿ ಖಾತಾ

ಐದು ಕೋಟಿ ವೆಚ್ಚದಲ್ಲಿ ನಗರಸಭೆ ನೂತನ ಕಟ್ಟಡ ಉದ್ಘಾಟನೆ

ಯಾದಗಿರಿ: ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಣಾ ಪ್ರಮಾಣ ಹೆಚ್ಚಿಸುವ ಉದ್ದೇಶದೊಂದಿಗೆ ಪರವಾನಿಗೆ ಪಡೆಯದೆ ಇರುವ ಗೃಹ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿ ಎ ಮತ್ತು ಬಿ ಖಾತಾ ನೀಡುವ ಬಗ್ಗೆ ಶೀಘ್ರವೇ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಅವರು ಹೇಳಿದರು.

ನಗರದಲ್ಲಿಂದು ಮಾನ್ಯ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ 4-ರಡಿ ನಗರಸಭೆ ಕಾರ್ಯಾಲಯದ ಐದು ಕೋಟಿ ರೂ. ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಹಲವು ವರ್ಷಗಳಿಂದ ಅನುಮತಿ ಸಿಗದೆ ಇರುವಂತಹ ಗೃಹ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬಿ.ಬಿ.ಎಂ.ಪಿ ಮಾದರಿಯಲ್ಲಿ ಎ ಮತ್ತು ಬಿ ಖಾತಾ ನೀಡಲು ಉದ್ದೇಶಿಸಿದೆ. ಈಗಾಗಲೇ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಹಲವಾರು ವರ್ಷಗಳಿಂದ ಈ ಸಮಸ್ಯೆ ತಲೆದೋರಿದ್ದು, ಶೀಘ್ರದಲ್ಲಿಯೇ ಈ ಕುರಿತು ಸರ್ಕಾರಿ ಆದೇಶ ಹೊರಬೀಳಲಿದೆ. ಇದರಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಏ- ಮತ್ತು ಬಿ- ಖಾತಾ ದೊರೆಯಲಿದ್ದು, ಇದರಿಂದ ಅಧಿಕೃತ ದಾಖಲಾತಿ ಸಾರ್ವಜನಿಕರಿಗೆ ಸಿಕ್ಕಂತಾಗುತ್ತದೆ. ಅದರಂತೆ ಇದರಿಂದ ನಗರಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹದಲ್ಲಿಯೂ ಹೆಚ್ಚಳವಾಗಲಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ನಗರೋತ್ಥಾನ ಹಂತ 4 ರ ಅಡಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬರುವ ಮಾರ್ಚ್ ನಂತರ ನಗರೋತ್ಥಾನ 5-ರ ಹಂತದಲ್ಲಿ ಪ್ರತಿ ಕ್ಷೇತ್ರವಾರು ತಲಾ 25 ಕೋಟಿ ರೂಗಳು ಬಿಡುಗಡೆ ಮಾಡುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.

ಯಾದಗಿರಿ ನಗರದಲ್ಲಿ ನಗರ ಸಭೆಗಾಗಿ 5 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.ಈ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರಿಗೆ 3.50 ಕೋಟಿ ರೂಗಳ ಬಾಕಿ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ಸರಕಾರದ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿತ್ತು. ಅಂತಹ ಯೋಜನೆಗಳು ಈಗ ಪೂರ್ಣಗೊಂಡಿದ್ದು ,ಅವುಗಳಿಗೆ ಈಗಿನ ಸರ್ಕಾರ ಅನುದಾನ ಬರಿಸುತ್ತಿದೆ ಎಂದು ಹೇಳಿದರು.

ಅದರಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮರ್ಪಕ ತೆರಿಗೆ ಸಂಗ್ರಹಣೆ ಆಗಬೇಕು. ಇದರಿಂದ ಮೂಲ ಸೌಕರ್ಯಗಳನ್ನು ಒದಗಿಸಲು ಸಹಕಾರಿಯಾಗಲಿದ್ದು, ಕನಿಷ್ಠ ಶೇ. 50ರಷ್ಟು ತೆರಿಗೆ ಸಂಗ್ರಹವಾದಲ್ಲಿ, ಅನುದಾನ ಬಿಡುಗಡೆಯಾಗಲು ಸಹ ಸಹಕಾರಿ ಆಗಲಿದೆ. ಆದರೆ ನಿಗದಿತ ಗುರಿ ಸಾಧಿಸದ ಹಿನ್ನೆಲೆಯಲ್ಲಿ ಜಿಲ್ಲೆಗೆ ಇನ್ನೂ 20 ಕೋಟಿ ರೂ ನಗರೋತ್ಥಾನ ಯೋಜನೆಯಡಿ  ಅನುದಾನ ಬರಬೇಕಾಗಿದೆ. ಅದರಂತೆ ಇಲ್ಲಿಯ ಪೌರಕಾರ್ಮಿಕರಿಗೆ ಕ್ವಾರ್ಟರ್ಸ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ ಪ್ರತಿ ಶಾಸಕರಿಗೆ ತಲಾ 10ಕೋ.ರೂ ಸರ್ಕಾರ ಒದಗಿಸಲು ಕ್ರಮ ಕೈಗೊಂಡಿದೆ .ಪಂಚ ಗ್ಯಾರಂಟಿ ಯೋಜನೆಗಳಡಿ 65000 ಕೋ.ರೂಗಳನ್ನು ಒದಗಿಸಿದೆ.ಕಲ್ಯಾಣ ಕರ್ನಾಟಕ ಕಕ್ಕೆ 5000 ಕೋಟಿ.ರೂ ಒದಗಿಸಿದೆ. 371(ಜೆ) ಜಾರಿಗೊಳಿಸಿ ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಿದೆ.ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ.ರಾಜ್ಯದ ಜನತೆಯ ವಿಶ್ವಾಸ ಸರ್ಕಾರ ಗಳಿಸಿದೆ ಎಂದು ಹೇಳಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ನಗರದಲ್ಲಿ ರಸ್ತೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಅಳವಡಿಸಿದೆ. ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ , ಶೀಘ್ರದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಘಟಕ ಆರಂಭ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ವೇಣುಗೋಪಾಲ್ ನಾಯಕ, ನಗರಸಭೆ ಅಧ್ಯಕ್ಷ ಲಲಿತಾ ಮೌಲಾಲಿ ಅನಪುರ, ಉಪಾಧ್ಯಕ್ಷ ರುಕಯ್ಯ ಬೇಗಮ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್,ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಮುಖ್ಯ ಅಭಿಯಂತರ ರಾಧಾಕೃಷ್ಣನ್, ಪೌರಾಡಳಿತ ಸಚಿವ ರೈ ಆಪ್ತ ಕಾರ್ಯದರ್ಶಿ ಕೆ.ಮುರಲಿಧರ,ಯೋಜನಾ ನಿರ್ದೇಶಕ ಲಕ್ಷ್ಮಿ ಕಾಂತ ರೆಡ್ಡಿ, ಮಹೇಶ್ ಮುದ್ನಾಳ, ಸುರೇಶ್ ಅಂಬಿಗೇರ್, ಕಾರ್ಯ ಪಾಲಿಕೆ ಅಭಿಯಂತರ ವಿಶ್ವನಾಥ್, ಪೌರಾಯುಕ್ತ ಉಮೇಶ್ ಚವಾನ್, ಸ ,ಕಾ.ಅ.ರಜನಿಕಾಂತ ಶೃಂಗೇರಿ , ಉಪಸ್ಥಿತರಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಸುಭಾಷ್ ಚಂದ್ರ ಕೌಲಗಿ, ಜ್ಯೋತಿ ಲತಾ ಮಾಡಿಬಿಡಿ ಅವರು ಉಪಸ್ಥಿತರಿದ್ದರು.