ಕಲಬುರಗಿ: ಊರಿಗೆ ಹೋಗಿ ಮರಳಿ ಮನೆಗೆ ಬಂದ ಪತಿ, ಪತ್ನಿಯೊಂದಿಗೆ ಪರಪುರುಷ ಇರುವುದನ್ನು ಕಂಡು ರೊಚ್ಚಿಗೆದ್ದು ಪತ್ನಿ ಹಾಗೂ ಪರಪುರುಷನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಮಾದನಹಿಪ್ಪರಗಾ ಗ್ರಾಮದ ನಿವಾಸಿಯಾಗಿದ್ದ ಸೃಷ್ಟಿ(22), ಖಾಜಪ್ಪ ವಡ್ಡರ್(23) ಎಂಬಾತರೆ ಕೊಲೆಯಾಗಿದ್ದು ಸೃಷ್ಟಿ ಪತಿ ಶ್ರೀಮಂತ ಭಕರೆ ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆ ಸೃಷ್ಟಿ ಹಾಗೂ ಶ್ರೀಮಂತ ಇಬ್ಬರಿಗೂ ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದೆ. ಈ ನಡುವೆ ಸೃಷ್ಟಿ ಹಾಗೂ ಖಾಜಪ್ಪ ಎಂಬಾತರ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು. ಇತ್ತ ಮೊನ್ನೆ ಶ್ರೀಮಂತ ಬೇರೆ ಊರಿಗೆ ಹೋಗಿದ್ದ ಗುರುವಾರ ರಾತ್ರಿ ಹೇಳದೆ ಕೇಳದೆ ಮರಳಿ ಮಾದನಹಿಪ್ಪರಗಾದ ಗ್ರಾಮಕ್ಕೆ ಬಂದಿದ್ದಾನೆ. ಮನೆಗೆ ಬಂದ ಶ್ರೀಮಂತನಿಗೆ ಪತ್ನಿ ಸೃಷ್ಟಿ ಪರಪುರುಷ ಖಾಜಪನ್ನೊಂದಿಗೆ ಇರುವುದನ್ನು ಕಂಡು ಕೆಂಡಾಮಂಡಲವಾಗಿ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ಪತ್ನಿ ಸೃಷ್ಟಿ ಹಾಗೂ ಪರಪುರುಷನನ್ನು ಕೊಚ್ಚಿ ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಕೊಲೆಯಿಂದಾಗಿ ಎರಡು ಮನೆಗಳಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.