ಕಲಬುರಗಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಜೆಸ್ಕಾಂ ಹಿರಿಯ ಸಹಾಯಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಬುಧವಾರ ಸಂಜೆ ೬ ಗಂಟೆ ಸುಮಾರಿಗೆ ನಡೆದಿದೆ.
ನಗರದ ಹಳೆ ಜೇವರ್ಗಿ ರಸ್ತೆಯ ಕೆಹೆಚ್‌ಬಿ ಕಾಲೋನಿಯ ಗಾಬರೆ ಲೇಔಟ್‌ನ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಜೆಸ್ಕಾಂನ ಹಿರಿಯ ಸಹಾಯಕ ಸಂತೋಷ್ ಕೊರಳಿ(೪೫), ಶೃತಿ( ೩೫) ಹಾಗೂ ಮಕ್ಕಳಾದ ಮುನಿಶ್(೦೯) ಹಾಗೂ ಮೂರು ತಿಂಗಳ ಮಗು ಅನಿಶ್ ಮೃತರಾಗಿದ್ದಾರೆ.
ಸಂತೋಷ್ ಮತ್ತು ಶೃತಿ ಅವರಿಗೆ ಕಳೆದ ೧೦ ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಸಂತೋಷನು ಬುಧವಾರ ಸಂಜೆ ೬ ಗಂಟೆ ಸುಮಾರಿಗೆ ಮೊದಲು ಪತ್ನಿ ಶೃತಿಯ ಕತ್ತು ಹಿಚುಕಿ, ನಂತರ ಇಬ್ಬರು ಮಕ್ಳಳ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ನಂತರ ಡೆತ್ ನೋಟ್ ಬರೆದು ತಮ್ಮ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ಕೌಟುಂಬಿಕ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿ, ತಾನೂ ನೇಣಿಗೆ ಶರಣಾಗಿದ್ದಾನೆ. ಶೃತಿಯು ಹುಮನಾಬಾದ ತಾಲೂಕಿನವರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಢಗೆ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಾಲಾಗಿದೆ. ಡೆತ್ ನೋಟನ್ನು ಫ್ಲೊರೆನೆಕ್ಸ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.