ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಿಗ್ರಾಮ ಸಮೀಪದ ಕಾರ್ಕಡ ಎಂಬಲ್ಲಿ ಪತ್ನಿಯನ್ನು ಪತಿ ಕೊಲೆಗೈದ ಬಗ್ಗೆ ವರದಿಯಾಗಿದೆ. ಶುಕ್ರವಾರ ಕೃತ್ಯ ಬೆಳಕಿಗೆ ಬಂದಿದೆ.
ಬೀದರ್ ದೊಣಗಪುರ ಮೂಲದ, ಪ್ರಸ್ತುತ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆ ನಿವಾಸಿ ಜಯಶ್ರೀ (31) ಕೊಲೆಗೀಡಾದ ಮಹಿಳೆ.
ಕೊಲೆ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯ ಗುಂಡ್ಮಿ (44) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಿರಣ್ ಕಳೆದ ಎರಡು ವರ್ಷಗಳಿಂದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಅವರು ಈಚೆಗೆ ವಿವಾಹವಾಗಿದ್ದರು. ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.