ಮೈಸೂರು: ನಾವು ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕೋ? ಬಿಜೆಪಿ ಸಂಸದರ ಆದೇಶ ಪಾಲನೆ ಮಾಡಬೇಕೋ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಮುನ್ನಾ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಈ ಹಿಂದೆಯೂ ಚಾಮುಂಡಿ ಬೆಟ್ಟದ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇತ್ತು, ಅದು ಕೂಡ ಸರ್ಕಾರದ ಅಧೀನದಲ್ಲೇ ಇತ್ತು. ಸರ್ಕಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ ನಂತರ ರಾಜಮಾತೆ ಪ್ರಮೋದಾದೇವಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆಗಸ್ಟ್ 22 ರಂದು ತಡೆಯಾಜ್ಞೆ ತೆರವುಗೊಂಡಿದೆ. ನ್ಯಾಯಾಲಯದ ತೀರ್ಮಾನದಂತೆ ಈಗ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾವು ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕೋ? ಬಿಜೆಪಿ ಸಂಸದರ ಆದೇಶ ಪಾಲನೆ ಮಾಡಬೇಕೋ? ನ್ಯಾಯಾಲಯದ ಆದೇಶದಂತೆ ನಡೆದರೆ ಹೇಗೆ ಕಾನೂನು ಬಾಹಿರವಾಗುತ್ತದೆ? ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ಪ್ರಾಧಿಕಾರದ ಮೊದಲ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.