ಶೃಂಗೇರಿ: ಬಂಧಿತ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಕೇರಳದಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಶುಕ್ರವಾರ ಕರೆತಂದು ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಕಾಂತ್ ಎಂಬುವವರ ಮನೆ ಮೇಲಿನ ದಾಳಿ ಸಂಬಂಧದ ವಿಚಾರಣೆಗೆ ಇಂದು ಅವರನ್ನು ಶೃಂಗೇರಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ಮಾವೋವಾದಿ ನಕ್ಸಲ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ.ಕೃಷ್ಣಮೂರ್ತಿ, ಸಾಕೇತ್ ರಾಜನ್ ಸಾವಿನ ಬಳಿಕ ರಾಜ್ಯದಲ್ಲಿ ನಕ್ಸಲ್ ಹೋರಾಟವನ್ನು ಮುನ್ನಡೆಸಿದ್ದರು. ಮೂಲತಃ ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ನಿವಾಸಿಯಾದ ಕೃಷ್ಣಮೂರ್ತಿ ೨೦೨೧ರಲ್ಲಿ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಸೆರೆಯಾಗಿದ್ದರು. ಕೇರಳ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಪೊಲೀಸರು ಶೃಂಗೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆತಂದು ಹಾಜರುಪಡಿಸಿದ್ದಾರೆ. ಇತ್ತೀಚಿಗಷ್ಟೇ ನಕ್ಸಲ ಕೋಟೆಹೊಂಡ ರವೀಂದ್ರ ಕೊನೆಯದಾಗಿ ಶರಣಾಗುವ ಮೂಲಕ ಕರ್ನಾಟಕ ನಕ್ಸಲ್ ನಿರ್ಮೂಲನ ರಾಜ್ಯವಾಗಿತ್ತು.
ರವೀಂದ್ರ ಶರಣಾಗುವ ಸಂದರ್ಭದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು. ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳಿಗೆ ಅನುದಾನ ಬಿಡುಗಡೆ ಮಾಡಿತ್ತು.