ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ನೇಹಾ ಹಿರೇಮಠ ಅವರ ತಂದೆ ಹಾಗೂ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಒತ್ತಾಯ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳು ನೇಹಾ ಹತ್ಯೆಯಾಗಿ ೧೦ ತಿಂಗಳಾಗಿದೆ. ಆರೋಪಿಗೆ ಶಿಕ್ಷೆಯಾಗಿಲ್ಲ. ನೇಹಾ ಹತ್ಯೆಯಾದಾಗ ನನ್ನ ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ ಹಾಗೂ ಇತರ ಸಚಿವರು ವಿಶೇಷ ನ್ಯಾಯಾಲಯ ರಚನೆ ಮಾಡಿ ೧೨೦ ದಿನಗಳಲ್ಲಿ ನ್ಯಾಯ ಕೊಡಿಸುತ್ತೇವೆ ಎಂದಿದ್ದರು. ಮುಖ್ಯಮಂತ್ರಿಗಳೂ ಇದೇ ರೀತಿ ಭರವಸೆ ನೀಡಿದ್ದರು. ಆದರೆ, ಮಗಳ ಹತ್ಯೆಯಾಗಿ ೧೦ ತಿಂಗಳಾದರೂ ಏನೂ ಆಗಿಲ್ಲ ಎಂದು ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಾಗಲಿ, ಸಿಐಡಿ ತನಿಖಾ ತಂಡದಿಂದ ಆರೋಪಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಿಲ್ಲ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿಲ್ಲ. ತನಿಖೆ ಬಗ್ಗೆಯೇ ಅನುಮಾನವಿದ್ದು, ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.