ಹರ್ಷ ಕುಲಕರ್ಣಿ
ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಗಿ ಶುಕ್ರವಾರಕ್ಕೆ (ಏ. ೧೮) ಭರ್ತಿ ಒಂದು ವರ್ಷ. ಆದರೆ, ಆಕೆಯ ಸಾವಿಗೆ ನ್ಯಾಯ ಸಿಗುವುದಿರಲಿ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗದಿರುವುದು ನೇಹಾ ಕುಟುಂಬಸ್ಥರಲ್ಲಿ ಅತೀವ ಬೇಸರ ಮೂಡಿಸಿದೆ.
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣ ಸದ್ಯ ಸದ್ದಿಲ್ಲದೇ ಶಾಂತವಾಗಿದೆ. ಆರೋಪಿಯ ಹತಾಶೆಯೇ ಕೊಲೆಗೆ ಕಾರಣ ಎಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿರುವ ಸಿಐಡಿ ಪೊಲೀಸರು, ಲವ್ ಜಿಹಾದ್ ಕುರಿತ ಯಾವುದೇ ವಿಚಾರಗಳನ್ನು ಅದರಲ್ಲಿ ನಮೂದಿಸಿಲ್ಲ ಎಂಬುದು ನೇಹಾ ಕುಟುಂಬಸ್ಥರ ಆರೋಪ.
ಕೊಲೆಯ ಸಿಸಿಟಿವಿ ದೃಶ್ಯಾವಳಿ, ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು, ಮರಣೋತ್ತರ ಶವ ಪರೀಕ್ಷೆ ಕೈಗೊಂಡ ವೈದ್ಯರು ಹಾಗೂ ತಜ್ಞರ (ಫೊರೆನ್ಸಿಕ್) ವರದಿಗಳನ್ನೂ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ಯಾರದ್ದೋ ಒತ್ತಡಕ್ಕೆ ಮಣಿದು ಸತ್ಯಾಸತ್ಯತೆಯನ್ನು ಮರೆಮಾಚಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸದ್ಯ ಧಾರವಾಡದ ಕಾರಾಗೃಹದ ಕಂಬಿ ಎಣಿಸುತ್ತಿರುವ ಆರೋಪಿ ಫಯಾಜ್ ವಿರುದ್ಧ ಐಪಿಸಿ ಕಲಂ ೩೦೨ (ಕೊಲೆ), ೩೪೧, ಹಾಗೂ ೫೦೬ (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೆ, ಆತನ ಪರವಾಗಿ ಯಾವ ಒಬ್ಬ ವಕೀಲರೂ ವಕಾಲತ್ತು ವಹಿಸಲು ಸಿದ್ಧರಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಕೀಲರೊಬ್ಬರು ಆತನ ಪರ ವಕಾಲತ್ತು ವಹಿಸಿದ್ದಾರೆ. ಈತನ್ಮಧ್ಯೆ ಆರೋಪಿ, ತನ್ನನ್ನು ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದಾನೆ.
ನೇಹಾ ಹತ್ಯೆ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿಲ್ಲ. ಅಲ್ಲದೆ, ಹುಬ್ಬಳ್ಳಿಯ ೩ನೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಇನ್ನೂ ವಿಚಾರಣೆ ಆರಂಭವೇ ಆಗಿಲ್ಲ.
ರಾಜ್ಯ ಸರ್ಕಾರದ ಆಧೀನದಲ್ಲಿರುವ ಸಿಐಡಿ ಅಧಿಕಾರಿಗಳು ಸತ್ಯಾಸತ್ಯತೆಗಳನ್ನು ದಾಖಲಿಸದೇ, ಕೆಲವರ ಆದೇಶದಂತೆ ತಮಗನುಕೂಲವಾಗುವಂತೆ ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಹೀಗಾಗಿ ಆರೋಪಿ ಫಯಾಜ್ ಜೈಲಿನಲ್ಲಿ ಆರಾಮಾಗಿದ್ದಾನೆ. ನಮಗೆ ಇನ್ನೂ ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಮಗಳ ಹಂತಕನಿಗೆ ಗಲ್ಲು ಶಿಕ್ಷೆ ಆಗೇ ಆಗುತ್ತೆ ಎಂಬ ಭರವಸೆ ಇದೆ.
- ನಿರಂಜನ ಹಿರೇಮಠ, ಮೃತ ನೇಹಾ ತಂದೆ