ರಬಕವಿ-ಬನಹಟ್ಟಿ: ರಾಜ್ಯದಲ್ಲಿ ನೇಕಾರರ ಸರಣಿ ಆತ್ಮಹತ್ಯೆ ಮುಂದುವರೆದಿದ್ದು, ರವಿವಾರ ಬನಹಟ್ಟಿಯ ಸಂಗಮೇಶ ಮುರಗೋಡ ನೇಣಿಗೆ ಶರಣಾಗಿದ್ದು, ರಾಜ್ಯದಲ್ಲಿ ೫೩ ಜನರ ಆತ್ಮಹತ್ಯೆಗೆ ಕಾರಣವಾಗಿದೆಯೆಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ವಿಷಾದಿಸಿದರು.
ಕೇವಲ ೨-೩ ಲಕ್ಷ ರೂ.ಗಳ ಸಾಲಕ್ಕೆ ನೇಕಾರರು ಜೀವ ಕಳೆದುಕೊಳ್ಳುತ್ತಿರುವದು ತೀವ್ರ ಆತಂಕಕಾರಿ ವಿಷಯವಾಗಿದೆ. ಗುಳೇದಗುಡ್ಡ ಸೇರಿದಂತೆ ಕೆಲವೆಡೆ ನೇಕಾರ ಕುಟುಂಬಗಳು ಮನೆ ಹರಾಜಿನ ಪರಿಸ್ಥಿತಿಯಲ್ಲಿದ್ದಾರೆ.
ಸಮಗ್ರ ಯೋಜನೆ ಜಾರಿ ಮಾಡಿ: ನೇಕಾರರ ಸಂಪೂರ್ಣ ಸಾಲಮನ್ನಾ ಜೊತೆಗೆ ಸಮಗ್ರ ಯೋಜನೆಯನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಿದರೆ ಸಾವಿರಾರು ನೇಕಾರ ಕುಟುಂಬಗಳು ನಿಟ್ಟುಸಿರು ಬಿಡಬಹುದಾಗಿದೆ. ಅತ್ಯಂತ ದಯನೀಯ ಸ್ಥಿತಿ ಎದುರಿಸುತ್ತಿರುವ ರಾಜ್ಯದ ನೇಕಾರರಿಗೆ ಸರ್ಕಾರ ಅಭಯ ಹಸ್ತ ನೀಡಬೇಕಿದೆ ಎಂದು ಟಿರಕಿ ಹೇಳಿದರು.
ಭರವಸೆಗೆ ಸೀಮಿತ: ಚುನಾವಣೆಗೆ ಮೊದಲು ಡಿ.ಕೆ.ಶಿವಕುಮಾರ ಅವರು ತೇರದಾಳ ಕ್ಷೇತ್ರಕ್ಕೆ ಆಗಮಿಸಿ ನೇಕಾರನ ಆತ್ಮಹತ್ಯೆ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಸಾಲಮನ್ನಾ ಜೊತೆಗೆ ನಿಮ್ಮೊಂದಿಗೆ ನಿರಂತರ ಇರುವದಾಗಿ ಭರವಸೆ ನೀಡಿದ್ದರು ಆದರೆ ಅದ್ಯಾವುದೂ ಆಗಿಲ್ಲ ಎಂದು ಟಿರಕಿ ಕಿಡಿಕಾರಿದರು.
ಬಡ್ಡಿ ಸಹಾಯ ಧನವಿಲ್ಲ: ೨೦೧೯ರಿಂದ ಸಹಕಾರ ಸಂಘಗಳಲ್ಲಿ ಸಾಲ ಪಡೆದಿರುವ ನೇಕಾರರಿಗೆ ಶೇ. ೧ ಮತ್ತು ೩ರ ಯೋಜನೆಯಡಿ ಬಡ್ಡಿ ಸಹಾಯ ಧನವು ಇಂದಿಗೂ ದೊರೆತಿಲ್ಲ. ರಾಜ್ಯದ ಶೇ. ೬೦ರಷ್ಟು ಸಹಕಾರಿ ಸಂಘಗಳಲ್ಲಿನ ನೇಕಾರರಿಗೆ ಈ ಯೋಜನೆಯಿಂದ ದೂರ ಉಳಿದಿರುವದು ಸಾಲದ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ತಕ್ಷಣವೇ ಐದಾರು ವರ್ಷಗಳ ಸಾಲಬಡ್ಡಿ ಸಹಾಯ ಧನವನ್ನು ಬಿಡುಗಡೆಗೊಳಿಸಬೇಕೆಂದು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು.
ಸಹಕಾರಿ-ಮೈಕ್ರೋದಿಂದ ಬಳಲಾಟ: ಇತ್ತ ಸಹಕಾರಿ ಸಂಘದಿಂದ ಪಡೆದಿರುವ ಸಾಲ ಹಾಗು ಬಡ್ಡಿ ತೀರಿಸಲು ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಮಾಡುತ್ತ ಇತ್ತ ಸಬ್ಸಿಡಿಯನ್ನೇ ಎದುರು ನೋಡುತ್ತ ದುಡಿಮೆಯ ಹಣವನ್ನೆಲ್ಲ ಸಾಲ ಹಾಗು ಬಡ್ಡಿ ತುಂಬಬೇಕಾದ ಪರಿಸ್ಥಿತಿ ನೇಕಾರರದ್ದು. ಕೂಡಲೇ ನೇಕಾರರ ಸಮಸ್ಯೆಗಳ ಕುರಿತು ಮನವರಿಕೆ ಹಾಗು ಪರಿಹಾರಕ್ಕಾಗಿ ತಂಡವೊಂದನ್ನು ರಚಿಸುವಂತೆ ಅವರು ಒತ್ತಾಯಿಸಿದರು.