ಕಲಬುರಗಿ: ಕೆಲ ದಿನಗಳ ಹಿಂದಷ್ಟೇ ರಾಜ್ಯದ ಕೆಲವೆಡೆ ಸಿಇಟಿ ವೇಳೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಂದ ತಾವು ಧರಿಸಿದ ಜನಿವಾರ ತೆಗೆಸಿದ್ದ ಪ್ರಕರಣಗಳು ಮಾಸುವ ಮುನ್ನವೇ ಇದೀಗ ನೀಟ್ ಪರೀಕ್ಷೆಯಲ್ಲೂ ಇಂಥದೇ ಘಟನೆ ಮರುಕಳಿಸಿದೆ.
ರವಿವಾರ ಕಲಬುರಗಿ ನಗರದ ಸೆಂಟ್ ಮೇರಿಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಯಲು ಬಂದ ಶ್ರೀಪಾದ ಸುಧೀರ್ ಪಾಟೀಲ್ ಎಂಬ ವಿದ್ಯಾರ್ಥಿಯನ್ನು ತಪಾಸಣೆಗೊಳಪಡಿಸಿದ ಅಲ್ಲಿಯ ಸಿಬ್ಬಂದಿಗಳು ಆತ ಜನಿವಾರ ಧರಿಸಿದ್ದಕ್ಕೆ ಆಕ್ಷೇಪಿಸಿದರಲ್ಲದೇ ಅದನ್ನು ತೆಗೆಯುವಂತೆ ತಾಕೀತು ಮಾಡಿದರೆನ್ನಲಾಗಿದೆ. ಆಗ ಆ ವಿದ್ಯಾರ್ಥಿಯು ಅನಿವಾರ್ಯವಾಗಿ ಜನಿವಾರ ತೆಗೆದು ಪರೀಕ್ಷಾ ಕೇಂದ್ರದೊಳಗೆ ಹೋದನೆಂದು ಆರಂಭಿಕ ಮಾಹಿತಿಯಿಂದ ಗೊತ್ತಾಗಿದೆ.
ಆಕ್ರೋಶ: ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶ್ರೀಪಾದ ಸುಧೀರ್ ಪಾಟೀಲ್ ಎಂಬ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಘಟನೆ ಆತಂಕಕಾರಿಯಾಗಿದೆ. ಇದು ಆ ಒಬ್ಬ ವಿದ್ಯಾರ್ಥಿಗಾದ ಅನ್ಯಾಯವಲ್ಲ. ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಕೃತ್ಯವಾಗಿದೆ ಎಂದು ಮಹಾಸಭಾ ರಾಜ್ಯ ಉಪಾಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಹಾಗೂ ಜಂಟಿ ಕಾರ್ಯದರ್ಶಿ, ಜಿಲ್ಲಾ ಪ್ರತಿನಿಧಿ ಪ್ರಮೋದ ದೇಶಪಾಂಡೆ ಆಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಿವಾರ ಹಿಂದೂ ಧರ್ಮದಲ್ಲಿ ಪವಿತ್ರ ಸಂಕೇತ. ಇದನ್ನು ತೆಗೆಯಲು ಒತ್ತಾಯಿಸುವುದು ಶ್ರೀಪಾದ ಸುಧೀರ್ ಪಾಟೀಲ್ ಅವರ ಧಾರ್ಮಿಕ ಭಾವನೆಗಳಿಗೆ ಅವಮಾನ. ಪರೀಕ್ಷಾ ನಿಯಮಗಳು ಭದ್ರತೆಗಾಗಿ ಇರಬೇಕು, ಧಾರ್ಮಿಕ ಚಿಹ್ನೆ ತೆಗೆಯಲು ಅಲ್ಲ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದು ಶಾಲಾ ಆಡಳಿತ ಮತ್ತು ಪರೀಕ್ಷಾ ಮೇಲ್ವಿಚಾರಕರ ಬೇಜವಾಬ್ದಾರಿತನವಾಗಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ವಿಷಾದನೀಯ. ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಸರ್ವಧರ್ಮ ಸಮಭಾವದ ಬಗ್ಗೆ ಮಾತನಾಡಿ, ಇಂತಹ ತಾರತಮ್ಯ ನಡೆಸುವುದು ನಾಚಿಕೆಗೇಡು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು. ಪ್ರತಿಯೊಬ್ಬರಿಗೂ ತಮ್ಮ ಧರ್ಮ ಆಚರಿಸುವ ಹಕ್ಕಿದೆ. ಕಲಬುರಗಿಯ ಈ ಕೃತ್ಯವನ್ನು ಖಂಡಿಸುತ್ತೇವೆ ಮತ್ತು ಶ್ರೀಪಾದ ಸುಧೀರ್ ಪಾಟೀಲ್ ಅವರಿಗೆ ನ್ಯಾಯ ಒದಗಿಸಬೇಕೆಂದು ಪ್ರಮೋದ ದೇಶಪಾಂಡೆ ಆಡಕಿ ಆಗ್ರಹಿಸಿದ್ದಾರೆ.