ನಾ ಅನ್ಕೊಂಡಿದ್ದೆ….

ಏನಾದರೂ ಘಟನೆ ಸಂಭವಿಸಿದ ನಂತರದಲ್ಲಿ ಹೀಗೇ ಆಗುತ್ತೆ ಎಂದು ನಾ ಅನ್ಕೊಂಡಿದ್ದೆ ಹಾಗೇ ಆಯ್ತು ನೋಡಿ ಎಂದು ಹೇಳುತ್ತಿದ್ದ ತಿಗಡೇಸಿ ಸಲುವಾಗಿ ಜನರು ಬೇಸತ್ತಿದ್ದರು. ಚುನಾವಣೆ ಫಲಿತಾಂಶದ ನಂತರ… ನಾನು ಹೀಗೇ ಆಗುತ್ತದೆ ಅನ್ಕೊಂಡಿದ್ದೆ…ಇಷ್ಟೇ ಮತಗಳ ಅಂತರದಿಂದ ಆರಿಸಿ ಬರುತ್ತಾರೆ ಎಂದು ಅವತ್ತೇ ನಾನು ಲೆಕ್ಕ ಹಾಕಿದ್ದೆ ಹಾಗೇ ಆಯಿತು ನೋಡಿ ಸ್ವಾಮೀ ಎಂದು ಹೇಳುವ ಮೂಲಕ ಜನರಿಗೆ ಮತ್ತಷ್ಟು ಇರಟೇಟ್ ಮಾಡುತ್ತಿದ್ದ. ತಿಗಡೇಸಿಯ ಈ ಸ್ವಭಾವ ನೋಡಿ.. ನೋಡಿ ಕೆಲವರು.. ಅಲ್ಲಪಾ ಅನ್ಕೊಂಡಿದ್ದು ಯಾಕ ಮೊದಲೇ ಹೇಳಲಿಲ್ಲ ಅಂದಾಗ… ಹೆ..ಹೆ… ನೀವು ಇದೇ ಪ್ರಶ್ನೆ ಕೇಳುತ್ತೀರಿ ಅಂತ ಅನ್ಕೊಂಡಿದ್ದೆ ಕೇಳಿಯೇ ಬಿಟ್ರಿ… ನಾ ಯಾಕೆ ಹೇಳಲಿಲ್ಲ ಅಂದರೆ… ಮನಸ್ಸಿನಲ್ಲಿನ ಮಾತು ಹೇಳಿಬಿಟ್ಟರೆ ಹುಸಿ ಹೋಗುವ ಸಂಭವ ಹೆಚ್ಚು ಇರುತ್ತೆ ಅದಕ್ಕೆ ಹೇಳಲಿಲ್ಲ ಅರ್ಥವಾಯ್ತಾ ಎಂದು ಜೋರಾಗಿ ಅಂದು ಬಾಯಿ ಮುಚ್ಚಿಸುತ್ತಿದ್ದ. ಅವತ್ತು ಮೇಕಪ್ ಮರೆಮ್ಮ ನೋಡು ತಿಗಡೇಸಿ ನಮ್ ಅಳಿಯ ನನ್ನ ಬಂಗಾರ ತಗೊಂಡು ಓಡಿ ಹೋಗಿದಾನೆ ಅಂದಾಗ… ಹೀಗೆ ಆಗುತ್ತೆ ಅಂತ ಅನ್ಕೊಂಡಿದ್ದೆ ಅಂದ. ಓಹೋ ಇವನಿಗೆ ಮೊದಲೇ ಗೊತ್ತಿತ್ತೋ ಏನೋ ಎಂದು ಮರೆಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಳು. ಕರಿಭೀಮವ್ವನ ಎಮ್ಮೆ ಕಳೆದು ಐದು ದಿನವಾಗಿತ್ತು. ಈ ವಿಷಯ ತಿಳಿದ ತಿಗಡೇಸಿ ಮುದ್ದಾಂ ಅವರ ಮನೆಗೆ ಹೋಗಿ… ನಿನ್ನ ಎಮ್ಮೆ ಕಳುವಾಗುತ್ಯೆ ಅಂತ ಅನ್ಕೊಂಡಿದ್ದೆ ಅಂದ. ಅಯ್ಯೋ ನಾನು ಹೋಗಿದೆ ಅಂದಿದ್ದೆ… ಇವನು ಕಳೆದುಹೋಗಿದೆ ಅಂತಿದಾನೆ…. ಇದರಲ್ಲಿ ಇವನ ಕೈವಾಡ ಇರಬಹುದು ಎಂದು ಅಂದುಕೊಂಡಳು… ಜಿಲಿಬಿಲಿ ಎಲ್ಲವ್ವನ ಮೊಮ್ಮಗಳ ವಿಷಯದಲ್ಲೂ ಹೀಗೆ ಹೇಳಿದ… ಗ್ಯಾನಮ್ಮ.. ಕರಿಭಾಗೀರತಿ ಎಲ್ಲರ ಮುಂದೆಯೂ ಇಂಥದ್ದೆ ಮಾತಾಡಿದ. ನಂತರ ಈ ಎಲ್ಲರೂ ಸೇರಿ ಮೀಟಿಂಗ್ ಮಾಡಿ… ಕೊನೆಗೆ ಪೊಲೀಸರಲ್ಲಿ ದೂರು ನೀಡಿದರು. ಮರುದಿನವೇ ಪೊಲೀಸರು ತಿಗಡೇಸಿಯನ್ನು ಹಿಡಿದುಕೊಂಡು ಹೋಗಿ…. ನಿಜ ಹೇಳು ಆಕೆಯ ಎಮ್ಮೆಯನ್ನು ಎಷ್ಟಕ್ಕೆ ಮಾರಿದೆ?… ಜಿಬಿಎ ಮೊಮ್ಮಗಳ ಲವ್ ಅಫೇರ್‌ನಲ್ಲಿ ನಿಂದೇನು ಕೈವಾಡ… ಎಂದು ಅದು ಇದು ಪ್ರಶ್ನೆ ಮಾಡಿ… ಇರೋಬರೋ ಕೇಸುಗಳನ್ನು ತಿಗಡೇಸಿ ತಲೆಗೆ ಕಟ್ಟಿ.. ಒಳಗೆ ಹಾಕಿದ್ದಾರೆ… ಪೊಲೀಸರ ಎದುರು… ಇದುಹೀಗೆ ಆಗುತ್ತದೆ ಎಂದು ಅನ್ಕೊಂಡಿದ್ಸೆ ಎಂದು ಮತ್ತೆ ಹೇಳುತ್ತಿದ್ದಾನೆ.