ಕೊಪ್ಪಳ: ನಾಯಿಯೊಂದು 8 ಜನರಿಗೆ ಕಚ್ಚಿದ್ದು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ಆತಂಕಗೊಂಡ ಜನರು ನಾಯಿಯನ್ನು ಹೊಡೆದು ಸಾಯಿಸಿದ ಘಟನೆ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ನಾಯಿಯು ವೃದ್ಧರು, ಮಹಿಳೆ ಮತ್ತು ಮಕ್ಕಳು ಸೇರಿ ಹಲವರಿಗೆ ಕಚ್ಚಿದೆ. ಇದರಿಂದಾಗಿ ಗಾಯಗೊಂಡ 7 ಜನರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಓರ್ವರನ್ನು ಮಾತ್ರ ಅಳವಂಡಿ ಪ್ರಾಥಮಿಕ ಆರೋಗ್ಯದಲ್ಲಿ ದಾಖಲಿಸಲಾಗಿದೆ.
ಹುಚ್ಚು ಹಿಡಿದಿದ್ದನೆನ್ನಲಾದ ನಾಯಿ ಹಣೆ, ಕಾಲು, ಕೈಗಳು ಸೇರಿ ವಿವಿಧ ಭಾಗಗಳಿಗೆ ನಾಯಿ ಕಡಿದಿದೆ. ನಾಯಿ ಹಾವಳಿಯಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದರು. ಬೆಳಿಗ್ಗೆಯಿಂದಲೇ ಪೊಲೀಸ್ ಅಧಿಕಾರಿಗಳು ನಾಯಿಯ ಹುಡುಕಾಟದಲ್ಲಿಯೇ ನಿರತರಾಗಿದ್ದರು. ನಾಯಿಯ ಕಾಟಕ್ಕೆ ಮನೆಯಿಂದ ಹೊರಗೆ ಬಾರದಂತೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನವಿ ಮಾಡಿದ್ದರು. ನಾಯಿ ಕಾಟ ತಾಳದೇ, ಭಯಬೀತರಾದ ಜನರು ನಾಯಿಯನ್ನು ಹಿಡಿದು ಕೊಂದಿದ್ದಾರೆ.