ಕಲಬುರಗಿ: ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ವೈಯಕ್ತಿಕವಾಗಿ ನಿಂದಿಸಿರುವುದು ಸರಿಯಲ್ಲ. ತಮ್ಮ ಸ್ಥಾನಕ್ಕೆ ತಕ್ಕಂತೆ ಘನತೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ. ಹೀಗಾಗಿ, ವಿಪಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ರಾಜ್ಯಪಾಲರಿಗೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳಿಗೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಆಡಳಿತ ಪಕ್ಷದ ಕಾರ್ಯವೈಖರಿ ಬಗ್ಗೆ ಕಟುವಾಗಿ ಟೀಕಿಸುವ ಸ್ವಾತಂತ್ರ್ಯವಿದೆ. ಆದರೆ ಲಕ್ಷ್ಮಣರೇಖೆ ಮೀರಿ ವಿನಾಃಕಾರಣ ಬೈದಿರುವುದು ಅಕ್ಷಮ್ಯ ಅಪರಾಧ. ಅನುಭವದ ಕೊರತೆಯಿಂದ ಸಮರ್ಥವಾಗಿ ವಿಪಕ್ಷ ನಾಯಕ ಕುರ್ಚಿ ಸ್ಥಾನ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೊಂದ ವ್ಯಕ್ತಿ. ಇದುವರೆಗೂ ಛಲವಾದಿ ಬಹಿರಂಗವಾಗಿ ಕ್ಷಮೆ ಕೇಳಿಲ್ಲ. ಆದರೆ, ಬಿಜೆಪಿಯವರು ಛಲವಾದಿ ನಾರಾಯಣಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಖರ್ಗೆ ಮನೆತನ ವಿರುದ್ಧ ಬೈಯುವುದಕ್ಕೆ ಬಿಟ್ಟಿದ್ದಾರೆ ಎಂಬ ದೂರಿದರು.
ಸಚಿಗೆ ಖರ್ಗೆ ಪ್ರಚೋದನೆ ಕೊಟ್ಟಿಲ್ಲ
ಚಿತ್ತಾಪುರದಲ್ಲಿ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಖರ್ಗೆ ಅವರ ವಿರುದ್ಧ ಬಳಸಿದ ಪದ ಪ್ರಯೋಗದ ಬಗ್ಗೆ ಸ್ವಾಭಾವಿಕವಾಗಿ ಪ್ರಶ್ನಿಸಿದ್ದಾರೆ. ನಮ್ಮ ಜಿಲ್ಲೆಗೆ ಬಂದು ನಮ್ಮ ಬಗ್ಗೆಯೇ ಬೈಯುವುದೂ ಸರಿನಾ? ಬೈಯುವುದಕ್ಕೆ ಏನಾದರೂ ಕಾರಣ ಬೇಕಲ್ಲವೇ? ಎಂದು ಪ್ರಶ್ನಿಸಿದರು. ಆದರೆ, ಸಚಿವರ ಪ್ರಚೋದನೆಯಿಂದ ಛಲವಾದಿ ನಾರಾಯಣಸ್ವಾಮಿ ಅವರನ್ನು ದಿಗ್ಬಂಧನ ಹಾಕಿರುವುದಿಲ್ಲ. ಆದರೆ ಬಿಜೆಪಿಯವರು ಮಾಡಿರುವ ಹೋರಾಟ ಹಾಸ್ಯಾಸ್ಪದವಾಗಿದೆ ಎಂದು ತಿರುಗೇಟು ನೀಡಿದರು.
ರಿಪಬ್ಲಿಕ್ ಬಳ್ಳಾರಿ ಮಾಡಿದವರು ಯಾರೂ?
ಕಲಬುರಗಿ ಜಿಲ್ಲೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಿಜೆಪಿಯವರು ಹೋರಾಟ ಕೈಗೆತ್ತಿಕೊಂಡಿದ್ದರೆ ಅದಕ್ಕೆ ಅರ್ಥ ಇರುತ್ತಿತ್ತು. ಆದರೆ, ಸಚಿವ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಇಲ್ಲಿ ಬಿಜೆಪಿ ನಾಲ್ಕೂ ಬಾರಿ ಪ್ರತಿಭಟನೆ ನಡೆಸಿದರೂ ಸಹ ಜನ ಮನ್ನಣೆ ನೀಡಿಲ್ಲ. ಜನರ ಯೋಗಕ್ಷೇಮ, ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿಯವರು, ಜಿಲ್ಲೆಗೆ ಅವರ ಆಡಳಿತಾವಧಿಯಲ್ಲಿ ಕೊಡುಗೆ ಏನಿದೆ? ಈ ಬಗ್ಗೆ ಮಾಧ್ಯಮದವರೇ ಸಿದ್ಧಪಡಿಸಿದ ವೇದಿಕೆಯಲ್ಲಿ ಬಹಿರಂಗ ಚರ್ಚೆಗೂ ಸಿದ್ಧ ಎಂದು ಪಂಥಾಹ್ವಾನ ನೀಡಿದರು. ನಾವೂ ಕಲಬುರಗಿ ಎಂದೂ ರಿಪಬ್ಲಿಕ್ ವನ್ನಾಗಿ ಮಾಡಿಲ್ಲ, ಆದರೆ ಬಳ್ಳಾರಿ ರಿಪಬ್ಲಿಕ್‌ವನ್ನಾಗಿ ಮಾಡಿದವರ ಪರಿಸ್ಥಿತಿ ಏನಾಗಿದೆ? ಈಗಾಗಲೇ ಕೋರ್ಟ್ ಶಿಕ್ಷೆ ಕೊಟ್ಟಿದೆ. ರಿಪಬ್ಲಿಕ್ ಬಳ್ಳಾರಿಗೆ ಕೈಜೋಡಿಸಿದ ಬಿ. ಶ್ರೀರಾಮುಲು ಅವರಿಂದ ನಾವು ನೀತಿ ಪಾಠ ಕೇಳಬೇಕಾ? ಎಂದ ಸಚಿವ ಶರಣಪ್ರಕಾಶ ಪಾಟೀಲ್ ಆಕ್ಷೇಪಿಸಿದರು. ಬಿಜೆಪಿ ತತ್ವ ಸಿದ್ಧಾಂತಗಳಿಗೆ ವಿರೋಧವಿದೆ ವಿನಃ ಇಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಏನಿಲ್ಲ. ಖರ್ಗೆ ಮನೆತನದವರು ಸಹ ಬಿಜೆಪಿ ತತ್ವ ಸಿದ್ಧಾಂತಗಳಿಗೆ ವಿರೋಧಿಸುತ್ತಿದ್ದರೆ ಹೊರತೂ ಯಾರ ವಿರುದ್ಧ ಹಗೆತನ ಸಾಧಿಸುತ್ತಿಲ್ಲ. ಬಿಜೆಪಿ ಎಂದು ಸ್ಪಷ್ಟಪಡಿಸಿದರು.
ಜನೌಷಧಿ ಕೇಂದ್ರ ಮುಚ್ಚಿಸಲು ಆದೇಶಿಸಲಾಗಿದೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ಸಿಗುತ್ತಿರುವಾಗ ಜನೌಷಧಿ ಕೇಂದ್ರದಿಂದ ರಿಯಾಯತಿ ದರದಲ್ಲಿ ಔಷಧಿ ಖರೀದಿ ಕೂಡ ಬಡವರಿಗೆ ಹೊರೆಯಾಗುತ್ತಿದೆ. ಈ ಕಾರಣದಿಂದ ಜನೌಷಧಿ ಕೇಂದ್ರ ಮುಚ್ಚಿಸಲು ಆದೇಶಿಸಲಾಗಿದೆ. ಈ ಹಿಂದೆ ೨೦೧೩-೧೪ರಲ್ಲೇ ವೈದ್ಯಕೀಯ ಶಿಕ್ಷಣ ಸಚಿವರಿದ್ದ ಸಂದರ್ಭದಲ್ಲಿ ಆದೇಶ ಮಾಡಲಾಗಿತ್ತು. ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ರದ್ದತಿಗೆ ಮುಂದಾಗಿರುವುದರಲ್ಲಿ ಯಾವ ರಾಜಕಾರಣ ಇಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೂ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ಆರಂಭಕ್ಕೆ ಪ್ರೋತ್ಸಾಹ ನೀಡಿಲ್ಲ ಎಂದ ಅವರು, ಜಾಗ ಕಲ್ಪಿಸಿಕೊಟ್ಟಿದ್ದರೆ ಸ್ವಂತ ಕಟ್ಟಡ ನಿರ್ಮಿಸಿಕೊಡುವ ಜವಾಬ್ದಾರಿ ನನ್ನದು ಎಂದರು.
ಸುತ್ತೋಲೆ ಹೊರಡಿಸುವೆ
ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಚೀಟಿ ಮೂಲಕ ಔಷಧಿ ಪಡೆಯುವಂತೆ ವೈದ್ಯರು ಸೂಚಿಸಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಯಾವ ವೈದ್ಯರು ಔಷಧಿ ಚೀಟಿ ಬರೆದುಕೊಡದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸುವುದಾಗಿ ಹೇಳಿದರು.
ಕೋವಿಡ್ ಆತಂಕ, ಭಯ ಬೇಡ
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತೆವಹಿಸಿ ಎಚ್ಚೆತ್ತುಕೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮಾರ್ಗಸೂಚಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ. ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶು, ಮಕ್ಕಳು ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ. ನೆಗಡಿ, ಶೀತ, ಜ್ವರ ಬಂದರೆ ಪರೀಕ್ಷೆಗೊಳಪಡಬಹುದು ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.