ನಾನು ಯಾರ ಮುಲಾಜಲ್ಲೂ ಇಲ್ಲ, ಇದ್ದದ್ದನ್ನು ಇದ್ದಂತೆ ಹೇಳಿದ್ದೇನೆ…

ಬೂಟಾಟಿಕೆ ಹೇಳಿಕೆಗೆ ಸಮರ್ಥನೆ
ಕೋಲಾರ:
ನಾನು ಯಾರನ್ನು ನಂಬಿಕೊಂಡು ಬದುಕುತ್ತಿಲ್ಲ. ನನ್ನ ಮೇಲೆ ನನಗೆ ನಂಬಿಕೆ ಇಟ್ಟುಕೊಂಡು ಬದುಕುತ್ತಿದ್ದೇನೆ. ಇದ್ದುದ್ದನ್ನು ಇದ್ದಂತೆ ಹೇಳುವುದು ನನ್ನ ಹ್ಯಾಬಿಟ್ ಎಂದು ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಆಪರೇಷನ್ ಸಿಂದೂರ ಹೇಳಿಕೆ ಕುರಿತು ಎದ್ದಿರುವ ವಿವಾದಕ್ಕೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಆಪರೇಷನ್ ಸಿಂದೂರ ಹೇಳಿಕೆ ಹಿನ್ನೆಲೆಯಲ್ಲಿ ಉಂಟಾದ ವಿವಾದ ನಿಮಗೆ ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ನನಗೇಕೆ ಮುಜುಗರ ಆಗಬೇಕು. ನಾನು ಯಾರ ಮುಲಾಜಿನಲ್ಲೂ ಇಲ್ಲ. ಯಾರ ಬಳಿಯಾದರೂ ಸಾಲ ಪಡೆದಿದ್ದೇನೆಯೇ? ಕಳ್ಳತನ ಮಾಡಿದ್ದೇನೆಯೇ? ಯಾರಿಗಾದರೂ ಮೋಸ ಮಾಡಿದ್ದೇನೆಯೇ? ಎಂದು ಮರು ಪ್ರಶ್ನೆ ಹಾಕಿದರು.
ಆಪರೇಷನ್ ಸಿಂದೂರ ಹೇಳಿಕೆ ವಿಚಾರದಲ್ಲಿ ನನ್ನ ವಿರುದ್ಧ ಟೀಕೆ ಮಾಡುತ್ತಿರುವ ವಿರೋಧಿಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುವೆ ಎಂದು ಕೊತ್ತೂರು ಹೇಳಿದರು.