ನಾಗ್ತಿ ಅಪರೂಪದ ದೃಶ್ಯಕಾವ್ಯಕ್ಕೆ 28 ರ ಹರೆಯ

0
23

ಮತ್ತೊಂದು ಕಾವ್ಯಕ್ಕೆ ಸಜ್ಜಾದ ಮೇಷ್ಟ್ರು

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ! ಅಮೆರಿಕ!! ಚಿತ್ರ 11-04-1997 ರಂದು ಬಿಡುಗಡೆಯಾಗಿತ್ತು ಇಂದು ಆ ಚಿತ್ರಕ್ಕೆ 28 ರ ಸಂಭ್ರಮ. ಇದೇ ಎಪ್ರಿಲ್‌ 06 ರಂದು ಅವರ ನನ್ನ ಪ್ರೀತಿಯ ಹುಡುಗಿಗೆ ೨೪ ವರ್ಷ ತುಂಬಿತ್ತು.
ಈ ಕುರಿತಂತೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇದು ಶುಭದಿನ. ನನ್ನ ಪಾಲಿಗೆ ಧನ್ಯತೆ, ಸಾರ್ಥಕತೆ ಮತ್ತು ಕೃತಜ್ಞತೆಗಳ ಸಂತೃಪ್ತಿಯ ದಿನ.11 ಏಪ್ರಿಲ್ 1997ರ ಮುಂಜಾನೆ ಭಯ, ಹಿಂಜರಿಕೆಗಳಿಂದ ಕನ್ನಡಿಗರೆದುರು ಮಂಡಿಸಿದ ಈ ನನ್ನ ದೃಶ್ಯಕಾವ್ಯವನ್ನು ಮಹಾಜನತೆ ಕಣ್ಣಿಗೊತ್ತಿಕೊಂಡು ಆನಂದಿಸಿದರು. ಸತತ ಒಂದು ವರ್ಷ ದಿನವಹಿ ನಾಲ್ಕು ಪ್ರದರ್ಶನಗಳು, ಹಾಗೂ ವಿಶ್ವಾದ್ಯಂತ ಮೊದಲ ಅದ್ದೂರಿ ಪ್ರದರ್ಶನ ಕಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ; ಬಹುಭಾಷಾ ಅವತರಣಿಕೆಗಳು; ರಾಜ್ಯ, ರಾಷ್ಟ್ರಪ್ರಶಸ್ತಿಗಳ ಗೌರವ. ಗೆಳೆಯ ರಮೇಶ್ ಅರವಿಂದ್ ಹೇಳುವಂತೆ ಇದು ಕೇಳಿದ್ದೆಲ್ಲ ಕೊಟ್ಟ ಕಲ್ಪವೃಕ್ಷ- ಕಾಮಧೇನು! ಅಣ್ಣಾವ್ರು ತಮ್ಮ ಮನೆಯಲ್ಲೇ ಆಡಿಯೋ ಬಿಡುಗಡೆ ಮಾಡಿದ್ದರು, ಅವರು ದಾದಾ ಫಾಲ್ಕೆ ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಪ್ರಶಸ್ತಿ ಪಡೆದಿದ್ದು; ಪೂರ್ಣಚಂದ್ರ ತೇಜಸ್ವಿಯವರು ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಈ ಕೃತಿಗೆ ಮಂಗಳೂರಿನ ಮಹತ್ವದ ‘ಸಂದೇಶ’ ಪ್ರಶಸ್ತಿ ಪಡೆದದ್ದು, ಅಸಂಖ್ಯ ಪ್ರಶಸ್ತಿಗಳು. ನೂರಾರು ಹೆತ್ತವರು ತಮ್ಮ ಹೆಣ್ಣುಮಗುವಿಗೆ ‘ಭೂಮಿಕಾ’ ಎಂದು ಹೆಸರಿಟ್ಟದ್ದು..ಚಿತ್ರೀಕರಿಸಿದ ಹಲವು ತಾಣಗಳು ಪ್ರವಾಸೀ ತಾಣಗಳಂತಾದದ್ದು…ಸವಿ ನೆನಪುಗಳ ಶಾಶ್ವತ ಸರಮಾಲೆ. …..ಹಿಡಿಯಷ್ಷು ವಿಷಾದಗಳೂ ಇವೆ. ಅಣ್ಣಾವ್ರು ನಿರ್ಗಮಿಸಿದರು. ಜತೆಗೆ ಚಿತ್ರದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ, ಸಿ.ಆರ್. ಸಿಂಹ, ಕಲಾನಿರ್ದೇಶಕ ಭದ್ರಾವತಿ ರಾಜು, ಗಾಯಕ ರಾಜು ಅನಂತಸ್ವಾಮಿ… ಅಮೆರಿಕೆಯಲ್ಲಿ ಹಲವು ಬಗೆಯಲ್ಲಿ ನೆರವಾಗಿದ್ದ ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ,ರವೀಂದ್ರನಾಥ್ ಸಹ ನಿರ್ಗಮಿಸಿದರು.ಆಗೆಲ್ಲ ಏಕಪರದೆಗಳ ಸುಂದರಿಯರದೇ ಸಾಮ್ರಾಜ್ಯ. ಸಾವಿರ ಪ್ರದರ್ಶನ ನೀಡಿದ್ದ ಮೈಸೂರಿನ ಶಾಂತಲೆ ತೀರಿಕೊಂಡಳು. ಮಂಡ್ಯದ ಮತ್ತು ಬೆಂಗಳೂರ ಶಾಂತಿ, ನಂದಾಗಳು ಇಲ್ಲವಾದರು.ಚಾಮರಾಜಪೇಟೆಯ ಉಮಾ ಹಾಸಿಗೆ ಹಿಡಿದು ಮಲಗಿದಳು. ಕೊಟ್ರೇಶಿಯಂಥ ಕಲಾತ್ಮಕ ಚಿತ್ರ ನಿರ್ಮಿಸಿದ್ದ ನಂದಕುಮಾರ್ ಈ ನನ್ನ ಹುಚ್ಚು ಸಾಹಸಕ್ಕೆ ಹಣ ಹೂಡಿದ್ದರು.ಅವರನ್ನು ಮತ್ತು ನನ್ನ ಎಲ್ಲ ಕಲಾವಿದ ತಂತ್ರಜ್ಞರನ್ನೂ ರಾಜಶ್ರೀ ಪಿಕ್ಚರ್ಸ್ ಸಂಸ್ಥೆಯನ್ನೂ ಮಾಧ್ಯಮ ಬಂಧುಗಳನ್ನೂ ಮುಖ್ಯವಾಗಿ ನೋಡಿದ ಈಗಲೂ ನೋಡುತ್ತಿರುವ ಮೆಚ್ಚುತ್ತಿರುವ ನಿಮ್ಮನ್ನು ಪ್ರೀತಿಯಿಂದ ನೆನೆಯುತ್ತಿದ್ದೇನೆ. ಆಗ ನನಗೆ ಮುವ್ವತ್ತೊಂಬತ್ತು. ಈಗ ಅರವತ್ತೇಳು. ಕಾಲ ಬದಲಾಗಿದೆ.ಮತ್ತೊಂದು ಕಾವ್ಯವನ್ನು ಸೃಷ್ಟಿಸಲು ಹೊರಟಿದ್ದೇನೆ. ಜತೆಗೆ ನೀವಿದ್ದೀರಿ ಎಂಬ ನಂಬುಗೆ. ನಮಸ್ತೆ ಎಂದಿದ್ದಾರೆ.

Previous articleಹೆಲಿಕಾಪ್ಟರ್ ಪತನ: ಮೂವರು ಮಕ್ಕಳು ಸೇರಿ 6 ಮಂದಿ ಸಾವು
Next articleಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ದಾಳ