ಹುಬ್ಬಳ್ಳಿ: ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುವ ಪಟ್ಟಣವಾಗಿರುವ ನವಲಗುಂದ ಪಟ್ಟಣಕ್ಕೆ ಬೈಪಾಸ ರಸ್ತೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಮ್ಮ ಬೇಡಿಕೆಯಂತೆ ಈಗಾಗಲೇ ಕೇಂದ್ರ ಸರ್ಕಾರದಿಂದ ನವಲಗುಂದ ಬೈಪಾಸ ರಸ್ತೆಗೆ ಅನುಮೋದನೆ ನೀಡಿದ್ದು ನಿಮಗೇಲ್ಲರಿಗೂ ಗೊತ್ತಿದ್ದ ವಿಷಯ. ಈ ವಿಷಯಕ್ಕೆ ಮುಂದುವರೆದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ( MoRTH ) ಸಲ್ಲಿಸಲಾಗಿದ್ದ ಜೋಡಣೆ ( alignment) ಮತ್ತು DPR ( ವಿವರವಾದ ಯೋಜನಾ ವರದಿ)ಯನ್ನು Alignment Approval Committee (AAC) ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ಈಗ ಟೆಂಡರ್ ಕರೆದು ಕಾರ್ಯವನ್ನು ಆರಂಭಿಸುವ ಹಂತಕ್ಕೆ ಬಂದು ತಲುಪಿದೆ.
ಇದರಿಂದ ನವಲಗುಂದ ಪಟ್ಟಣಕ್ಕೆ 10.575 km ಉದ್ದದ ಸುಮಾರು 327 ಕೋಟಿ ರೂಪಾಯಿ ವೆಚ್ಚದ ಬೈಪಾಸ ರಸ್ತೆ ನಿರ್ಮಾಣವಾಗಲಿದೆ. ನವಲಗುಂದ ಪಟ್ಟಣ ಅನೇಕ ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ನಗರಗಳಿಗೆ ಸಂಪರ್ಕ ಜೋಡಿಸುವ ಪಟ್ಟಣವಾಗಿದ್ದು ನವಲಗುಂದದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಸಂಚಾರ ದಟ್ಟವಾಗಿರುತ್ತದೆ. ಈ ಬೈಪಾಸ್ ನಿರ್ಮಾಣದಿಂದ ಹೆದ್ದಾರಿಯ ಪ್ರಯಾಣಿಕರಲ್ಲದೆ ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗಲಿದೆ. ಸ್ಥಳಿಯರ ಅಭಿಪ್ರಾಯ ಪಡೆದು ಬೆಣ್ಣಿಹಳ್ಳ ಮತ್ತು ಅದಕ್ಕೆ ಸೇರುವ ಸಣ್ಣ ಹೊಳೆಗಳು (ನಾಲಾಗಳು) ಮಳೆಗಾಲದಲ್ಲಿ, ಪ್ರವಾಹವನ್ನು ಉಂಟುಮಾಡುವ ಸಾಧ್ಯತೆಯನ್ನು ಹಾಗೂ ಅದರಿಂದ ಕೃಷಿ ಭೂಮಿಯ ನಷ್ಟವಾಗದಂತೆ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಪಾಸ ರಸ್ತೆಯ ನಿರ್ಮಾಣಕ್ಕೆ AACಯಿಂದ ಅನುಮತಿ ದೊರೆತಿದೆ. ಅತ್ಯಂತ ಅವಶ್ಯಕವಾಗಿದ್ದ ಈ ಕಾಮಗಾರಿಗೆ ನನ್ನ ಮನವಿಗೆ ಸ್ಪಂದಿಸಿ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.