ಕೈಮನೆಯ ಸಂಘದಲ್ಲಿ ಹಗಲೆಲ್ಲ ಜಗಳವಾಗುತ್ತಿರುವುದನ್ನು ಬಿಡಿಸಲು ಅಸಿಸ್ಟೆಂಟ್ ಹೆಡ್‌ಮಾಸ್ಟರ್‌ಗಳು ಡೆಲ್ಲಿಯಿಂದ ಆಗಮಿಸಿ ಜಗಳವಾಡಿದ ಗ್ಯಾಂಗ್‌ಗಳ ಮಧ್ಯೆ ರಾಜಿ ಪಂಚಾಯ್ತಿ ಮಾಡಲು ಯತ್ನಿಸಿದರು. ಎರಡೂ ಗ್ಯಾಂಗಿನವರನ್ನು ಒಂದೇ ಕ್ಲಾಸ್ ರೂಮಿನಲ್ಲಿ ಕೂಡಿಸಿ. ನಾವು ಮಾತನಾಡುತ್ತೇವೆ, ಎಲ್ಲವನ್ನೂ ಕೇಳುತ್ತೇವೆ… ಹಾಗೇನಾದರೂ ಇದ್ದರೆ ಬಗೆಹರಿಸುತ್ತೇವೆ ಡೋಂಟ್ ವರಿ ಅಂದಾಗ ಸಂಘದ ಕೆಲ ಸದಸ್ಯರಿಗೆ ಸಮಾಧಾನವಾಯಿತು. ಎರಡೂ ಕಡೆಯ ಗ್ಯಾಂಗಿನ ಬಾಲಕರೆಲ್ಲ ಕ್ಲಾಸ್ ರೂಮಿನಲ್ಲಿ ಒಂದೇ ಕಡೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಹೆಡ್ಮಾಸ್ತರು ಬಂದು ಏನ್ರಯ್ಯ ಇದು ಹರಟೆ ಎಂದಾಗ…. ಇಲ್ಲ ಸಾಮೀ ಎಂದು ಮತ್ತೆ ಸುಮ್ಮನೇ ಕುಳಿತರು. ಏನ್ರೋ ನಿಮ್ಮೊಳಗೆ ಜಗಳ ಅಡುತ್ತೀರಂತೆ ಯಾಕೆ ಎಂದು ಒಂದು ಗ್ಯಾಂಗಿನ ತೆಳ್ಳನೆಯ ಹುಡುಗನನ್ನು ಕೇಳಿದರು. ಆ ಹುಡುಗ ಕೈ ಕಟ್ಟಿಕೊಂಡು… ನೋಡ್ರೀ ಸರ… ನಾನು ಸಾವ್ಕಾರ್ ಉಡುಗ.. ನಾ ಏನರ ಅಂದರೆ ಅವರು ತಮಗೇ ಅಂತಿದಾನೆ ಎಂದು ತಿಳಿದುಕೊಂಡರೆ ನಾನೇನು ಮಾಡಬೇಕು ಸಾ…ಅಂದ. ಆಯಿತು ನಿಂದೇನಪಾ ನೀನು ಏನೋ ಅಂದಿಯಂತಲ್ಲ ಅಂದಾಗ… ಇಲ್ಲ ಸಾರ್… ಅದ್ಯಾರೋ ಸಾಬ್ರು ಬೇಜಾರಾಗಿದ್ದಾರಂತಲ್ಲ ನಿಮ್ಮ ಸಲುವಾಗಿ ಅಂದಾಗ… ನಾವೇನು ಅವರ ಹೊಲ ಬರಿಸ್ಕಂಡಿವಾ? ಅಂದೆ ನಿಜ ಆದರೆ ನಾವು ಹೊಲ ಬರಸ್ಕಂಡಿಲ್ಲ ಸಾಮಿ ಅಂದ. ಈ ಗ್ಯಾಂಗಿನ ಕಡೆಗೆ ತಿರುಗಿ ನಿಮದೇನಪಾ ಎಂದು ಕೇಳಿದರು. ನೋಡಿ ಸಾ…ನಮ್ ಸಾಬ್ರಿಗೆ ಸುಮ್ ಸುಮ್ನೆ ಏನೇನೋ ಅಂದು ಕುರ್ಚಿ ಮೇಲೆ ಕೂಡಲಾರದ ಹಾಗೆ ಮಾಡಬೇಕು ಎಂದು ಇವರ ಪ್ಲಾನು ಸಾರ್..ಅವರು ಸುಮ್ಮನೇ ಅಂದಾಗ ನಾನೂ ಸಹ ನಮ್ ಸಾಹೇಬ್ರೇ ಗ್ರೇಟು-ನೀವೆಲ್ಲ ಗಿಲೀಟು ಅಂದಿದ್ದು ನಿಜ ಸಾ ಅಂದ ಆ ಗ್ಯಾಂಗಿನ ಒಬ್ಬ ಎದ್ದು ಅದು ಹಂಗಲ್ಲ ಸಾ..ಸುಳ್ಳೇ ಮಂಗ್ಯಾನಂಗ ಮಾತಾಡ್ತಾನ ಅಂದಕ್ಕೆ ಈ ಗ್ಯಾಂಗಿನವರು ಸಿಟ್ಟಿಗೆದ್ದರು. ಇನ್ನೇನು ಬಡಿದಾಟವಾಗಬೇಕು ಅನ್ನುವಷ್ಟರಲ್ಲಿ ಏಯ್ ಸುಮ್ನಿರ‍್ರೋ ಅಂದು ಇನ್ನು ಮುಂದೆ ಯಾರೂ ಜಗಳವಾಡಬೇಡಿ ಆಯ್ತಾ ಅಂದಾಗ ಎಲ್ಲರೂ ಸಾರಿ…ನಾವೆಲ್ಲ ಅಣ್ತಂಬ್ರು…ನಾವೆಲ್ಲ ಅಣ್ತಂಬ್ರು ಎಂದು ಮೂರು ಸಲ ಅಂದು ಕೈ ಮೇಲೆ ಕೈ ಹಾಕಿ ಪ್ರಾಮೀಸ್ ಮಾಡಿದರು. ಇನ್ನೇನು ಜಗಳ ಬಗೆಹರಿಯಿತು ನಾವು ಊರಿಗೆ ಹೋಗುತ್ತೇವೆ ಎಂದು ವಸ್ತಿಬಸ್ ಹತ್ತಿ ಊರಿಗೆ ಹೊರಡುವಾಗ ಹೆಡ್ಮಾಸ್ತರ್ ಮೊಬೈಲ್‌ಗೆ ಕರೆ ಬಂತು. ಹೇಳಪಾ ಅಂದಾಗ ಸಾ…ಮತ್ತೆ ಜಗಳ ಶುರುವಾಗಿದೆ ಅಂದ. ಹೆಡ್ಮಾಸ್ರ‍್ರೂ ಇರಲಿ ಬುಡಿ ಹಾಳಾಗಿ ಹೋಗಲಿ ಎಂದು ಸುಮ್ಮನಾದರು.