ನನ್ನ ಕೇಳಿ ಸಂಪುಟ ರಚಿಸಲ್ಲ ಬಿಜೆಪಿ ನಡೆ ಸಂವಿಧಾನ ವಿರೋಧಿ

ಚಿತ್ರದುರ್ಗ: ನನ್ನ ಕೇಳಿ ಸಚಿವ ಸಂಪುಟ ರಚನೆ ಮಾಡುವುದಿಲ್ಲ. ಅದು ವರಿಷ್ಠರ ಸೂಚನೆ ಮೇರೆಗೆ ಮುಖ್ಯಮಂತ್ರಿ ಕೈಗೊಳ್ಳುವ ಪರಮಾಧಿಕಾರ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಹೊಸದುರ್ಗ ತಾಲೂಕು ನೀರಗುಂದ ಬಳಿ `ಕುಸುಮ್ ಸಿ’ ಯೋಜನೆಯಡಿ ನಿರ್ಮಾಣವಾದ ಸೋಲಾರ್ ಪಾರ್ಕ್‌ಗೆ ಸೋಮವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಅವರು, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸುವ ಜಗದೀಶ್ ಶೆಟ್ಟರ್ ಬಳಿ ದಾಖಲೆ ಇದ್ದರೆ ನೀಡಲಿ, ತನಿಖೆ ನಡೆಸುತ್ತೇವೆ. ಸಿಎಂ, ಗೃಹಸಚಿವರು ಕ್ರಮ ಕೈಗೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.
ಸಂವಿಧಾನ ಕೈಲಿಡಿದು ಓಡಾಡುವವರು ದೇಶದ್ರೋಹಿಗಳೆಂದು ಪ್ರಹ್ಲಾದ್ ಜೋಶಿ ಹೇಳುತ್ತಾರೆ. ನಮ್ಮ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ. ಸಂವಿಧಾನ ಕೈಲಿಡಿದು ಓಡಾಡಬೇಡಿ ಎನ್ನುವವರು ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆ.ರವಿ, ಗಣಪತಿ ಆತ್ಮಹತ್ಯೆ ಪ್ರಕರಣ ಬಗ್ಗೆ ಬಿಜೆಪಿ ಧರಣಿ ಮಾಡಿತ್ತು. ವಿಧಾನಸೌಧದಲ್ಲಿ ಧರಣಿ ಕುಳಿತರು, ಮಲಗಿದರು. ನಾನು ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರದಲ್ಲಿ ರಾಜೀನಾಮೆ ನೀಡಿದ್ದೆ. ಸಿಐಡಿ ಬಿ ರಿಪೋರ್ಟ್ ನೀಡಿತು, ಸಿಬಿಐ, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಏನಾಯ್ತು? ಮತ್ತೆ ಯಾರಾದರೂ ಆ ಪ್ರಕರಣಗಳ ಬಗ್ಗೆ ಮಾತಾಡಿದ್ರಾ? ಎಂದು ಪ್ರಶ್ನೀಸಿದ ಸಚಿವರು, ಪ್ರಿಯಾಂಕ್ ಖರ್ಗೆ ಮತ್ತು ಸಚಿನ್ ಆತ್ಮಹತ್ಯೆಗೂ ಏನ್ ಸಂಬಂಧ ಎಂದು ಕೇಳಿದರು.
ಬಿಜೆಪಿಯಿಂದ ಹಿಟ್ ಅ್ಯಂಡ್ ರನ್, ಲಾಜಿಕ್ ಎಂಡ್ ಮಾಡಿದ್ದಾರಾ? ಬಿಜೆಪಿ ಆರೋಪಕ್ಕೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.
ರಾಜ್ಯಾದ್ಯಂತ ೧೬೯ ಸೋಲಾರ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.