ನನ್ನ ಆಸ್ತಿ ಇನ್ನೂ ಜಾಸ್ತಿಯಿದೆ

0
27

ವಿಜಯಪುರ: ನಾನು ಹೆಂಗ ಅದೀನಿ ಅಂದ್ರ ಗಾಂಧಿಚೌಕ್‌ನಾಗ ಅಜ್ಜ ಅಂಗಿ ಕಳದು ಕುಂತಾನಲಾ ನಾನು ಹಂಗದೀನಿ' ಎಂದು ಸಂಸದ ರಮೇಶ ಜಿಗಜಿಣಗಿ ತಮ್ಮ ಚಾರಿತ್ರ್ಯವನ್ನು ಮಹಾತ್ಮ ಗಾಂಧಿಗೆ ಹೋಲಿಸಿಕೊಂಡರು. ರೈಲ್ವೇ ನಿಲ್ದಾಣ ಅಭಿವೃದ್ದಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಮೂಲಕ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ನಾನು ನನ್ನ ಮಕ್ಕಳು ಗಳಿಸಿದ ಆಸ್ತಿಯೇ ೧೫೦ ಎಕರೆ ಭೂಮಿ ಇದೆ. ಯಾರಪ್ಪನದೂ ಅಲ್ಲ. ರೋಡ ಕೆದರಿ ರೊಕ್ಕ ಮಾಡೀನಾ, ಯಾರಿಗನ ಲಂಚ ಕೇಳಿದೆನಾ? ಎಂದರು. ಮೂರು ಸಾವಿರಕ್ಕ ಮನೆ ತಗೊಂಡಿರತೀರಿ, ಈಗ ಒಂದೂವರಿ ಕೋಟಿ ರೂ. ಆಗಿರತದ. ಹಂಗ ನನ್ನ ಆಸ್ತಿ ಮೌಲ್ಯನೂ ಹೆಚ್ಚಾಗಿದೆ. ಮಾಧ್ಯಮದವರು ಇನ್ನೂ ಕಡಿಮೆ ಬರೆದಿದ್ದಾರೆ. ನನ್ನ ಆಸ್ತಿ ಇನ್ನೂ ಜಾಸ್ತಿಯಿದೆ’ ಎಂದರು.

ನಾನೇ ಅಭ್ಯರ್ಥಿ…
ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿಯೂ ನಾನೇ ಅಭ್ಯರ್ಥಿ, ನನಗೆ ಈ ಭಾಗದ ಜನ ವೋಟ್ ಹಾಕುತ್ತಾರೆ. ಹೈಕಮಾಂಡ್‌ನಿಂದಲೂ ಈಗಾಗಲೇ ನನಗೆ ಸೂಚನೆ ಬಂದಿದೆ. ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದಿದ್ದೇನೆ. ಇಲ್ಲಿಯವರೆಗೆ ಯಾರು ಇಷ್ಟೊಂದು ಕೆಲಸ ಮಾಡಿದ್ದಾರೆ. ಇದೆಲ್ಲ ಇತಿಹಾಸ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಪ್ರಶ್ನೆ ಎದುರಾಗಲಾರದು. ಗೆಲ್ಲುವ ಕ್ಷೇತ್ರವನ್ನು ಯಾಕೆ ಬಿಟ್ಟುಕೊಡ್ತಾರೆ. ಒಂದೊಮ್ಮೆ ಬಿಟ್ಟುಕೊಟ್ಟಿದ್ದೇ ಆದರೆ ಹೈಕಮಾಂಡ್ ಏನು ಹೇಳುತ್ತದೋ ಹಾಗೆ ಮಾಡುತ್ತೇನೆ ಎಂದರು.

Previous articleನಾನು ಜಿಗಣಿ ಇದ್ದಂತೆ, ರಕ್ತ ಬರುವವರೆಗೂ ಬಿಡುವುದಿಲ್ಲ
Next articleಪಾಕಿಸ್ತಾನ: ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮರ್ಯಮ್ ಆಯ್ಕೆ