ಧಾರವಾಡ: ಮುಖ್ಯಮಂತ್ರಿ ಆಗಲು ಯಾರಿಗೆ ಆಸೆ ಇರುವುದಿಲ್ಲ ಹೇಳಿ…? ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದು ವಸತಿ ಸಚಿವ ಜಮೀರ ಅಹ್ಮದ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ವಿ. ದೇಶಪಾಂಡೆ ಅವರು ಹಿರಿಯರು. ೮-೯ ಬಾರಿ ಶಾಸಕರಾಗಿ ಆಯ್ಕೆಯಾದವರು. ಅವರಿಗೂ ಒಂದು ಬಾರಿ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ. ಆಸೆ ಪಡುವುದರಲ್ಲಿ ತಪ್ಪೇನಿದೆ…? ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.
ಸಿಎಂ ಅವರು ಪದೇ ಪದೇ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಮೀರ್, ನಾನೂ ಸಹ ಅನೇಕ ಬಾರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೇನೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುತ್ತಾರೆ. ಅಲ್ಲಿಗೂ ನಾನು ಹೋಗಿದ್ದೇನೆ ಏನಾದರೂ ಆಗಿದೆಯಾ..? ಎಂದು ಪ್ರಶ್ನಿಸಿದರು.