ಗದಗ(ಮುಂಡರಗಿ): ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಮುಳುಗಿ ನಾಪತ್ತೆಯಾದ ಮೂರು ಜನ ಸ್ನೇಹಿತರ ಪೈಕಿ, ಇಬ್ಬರು ಶವ ಪತ್ತೆಯಾಗಿದ್ದು, ಇನ್ನೊಬ್ಬನ ಶವ ಪತ್ತೆಗಾಗಿ ಅಗ್ನಿಶಾಮಕ ದಳ, ಮೀನುಗಾರರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ತಾಲೂಕಿನ ಕೊರ್ಲಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ ಮಾರ್ಚ್ ೮ರಂದು ಸ್ನಾನಕ್ಕೆ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಮೂರು ಜನ ಸ್ನೇಹಿತರನ್ನು ಪತ್ತೆಗಾಗಿ ಶನಿವಾರ ಸಂಜೆಯವರೆಗೂ ಕಾರ್ಯಾಚರಣೆ ನಡೆಯಿತು. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಮರುದಿನ ಭಾನುವಾರ ಬೆಳಗ್ಗೆಯಿಂದಲೂ ನೀರಿನಲ್ಲಿ ಮುಳುಗಿದವರ ಹುಡುಕಾಟ ಚುರುಕುಗೊಳಿಸಿ ಗದಗ ಜಿಲ್ಲೆಯ ಶಿರಹಟ್ಟಿ ಮೂಲದ ಮೂವರ ಪೈಕಿ ಮಹೇಶ ಬಡಿಗೇರ(೩೬) ಹಾಗೂ ಗುರುನಾಥ ಬಡಿಗೇರ(೩೮) ಎಂಬ ಶವವಾಗಿ ಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಇನ್ನೊಬ್ಬ ಶರಣಪ್ಪ ಬಡಿಗೇರ(೩೪) ಎಂಬಾತನಿಗಾಗಿ ಅಗ್ನಿಶಾಮಕದಳ ಹಾಗೂ ಮೀನುಗಾರರು ಹುಡುಕಾಟ ನಡೆಸಿದ್ದಾರೆ. ಶೋಧನಾ ಕಾರ್ಯದಲ್ಲಿ ಎರಡೂ ಮೃತದೇಹ ಪತ್ತೆಯಾದ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅವರ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.