ನದಿಗೆ ವಿಷ: ಸಾವಿರಾರು ಮೀನುಗಳ ಸಾವು!

0
11

ಮೂಡಿಗೆರೆ: ಹೇಮಾವತಿ ನದಿಗೆ ಕಿಡಿಗೇಡಿಗಳು ವಿಷಹಾಕಿದ್ದು, ಸಾವಿರಾರು ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ತಾಲ್ಲೂಕಿನ ಬಣಕಲ್ ಗ್ರಾಮದ ಬಳಿ ನಡೆದಿದೆ.
ಇದರ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ನದಿಯ ದಡದಲ್ಲಿ ಹಾಗೂ ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಭಯಾನಕ ದೃಶ್ಯ ಕಂಡು ಬಂದಿದೆ.
೨ ಕಿ.ಮೀ. ವರಗೆ ಸಾವಿರಾರು ಮೀನುಗಳು ಮೃತಪಟ್ಟಿದ್ದು, ನೀರಿನಲ್ಲಿ ಮೀನುಗಳು ತೇಲುತ್ತಿವೆ. ಕಿಡಿಗೇಡಿಗಳು ಮೈಲುತುತ್ತು (ನೈಸರ್ಗಿಕ ಅಥವಾ ರಾಸಾಯನಿಕ ವಿಷ) ಬಳಸಿ ಮೀನುಗಳ ಮಾರಣಹೋಮ ನಡೆಸಿದಂತೆ ಅನುಮಾನ ಮೂಡಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಳನ್ನು ಕಡಿಮೆ ಖರ್ಚಿನಲ್ಲಿ ಮಾರಾಟ ಮಾಡಲು ಈ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ನದಿ ನೀರು ಹಾಸನದ ಗೊರೂರು ಡ್ಯಾಂ ಸೇರುತ್ತದೆ. ಈ ವಿಷಕಾರಿ ನೀರು ಪರಿಸರ ಮತ್ತು ಮಾನವ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾರ್ಗ ಮಧ್ಯೆ ಹತ್ತಾರು ಹಳ್ಳಿಗಳ ಜನ ಕುಡಿಯುವ ನೀರಾಗಿ ಈ ನದಿಯನ್ನು ಅವಲಂಬಿಸಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಈ ರೀತಿಯ ವಿಷಪ್ರಯೋಗದ ಕೃತ್ಯಗಳು ಮುಂದುವರೆಯದಂತೆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದರಿಂದ ಸಾರ್ವಜನಿಕರ ದೂರಿನ ಮೇರೆಗೆ ಪ್ರಕರಣ ದಾಖಲಾಗುತ್ತಿದ್ದು, ತನಿಖೆಗೆ ಪೊಲೀಸರು ಮುಂದಾಗುವ ಸಾಧ್ಯತೆಗಳಿವೆ.

Previous articleಒಳಮೀಸಲು ಜಾರಿಗೆ ಸರ್ಕಾರದ ದಿಟ್ಟ ನಡೆ
Next articleಸ್ವಾಮೀಜಿ ನಡೆಗೂ ಆಕ್ಷೇಪ ಎತ್ತಿದ ಕಾಶಪ್ಪನವರ