ನಗರಸಭೆ ಚುನಾವಣೆ: ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ

0
36

ಗದಗ : ಭಾರೀ ಹೈಡ್ರಾಮಾದೊಂದಿಗೆ ನಡೆದಿದ್ದ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಾಂಗ್ರೇಸ್ ಅಭ್ಯರ್ಥಿUಳ ಆಯ್ಕೆಯನ್ನು ಚುನಾವಣಾಧಿಕಾರಿ ಹಾಗೂ ಗದಗ ಉಪವಿಭಾಗಾಧಿಕಾರಿ ತಡೆಹಿಡಿದಿದ್ದಾರೆ.
ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಪಿಟಿಶನ್ ೧೦೦೧೨೪ರ ಮುಂದಿನ ಆದೇಶದವರೆಗೆ ಆಯ್ಕೆಯಾಗಿರುವ ಅಧ್ಯಕ್ಷ,ಉಪಾಧ್ಯಕ್ಷರು ನಗರಸಭೆಯ ಯಾವದೇ ಅಧಿಕಾರ ಭಾರ,ಕಾರ್ಯಕಲಾಪಗಳನ್ನು ನಡೆಸದಂತೆ ಚುನಾವಣಾಧಿಕಾರಿ ಎಂ.ಗಂಗಪ್ಪ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಗದಗ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಾಂಗ್ರೇಸ್‌ನ ಕೃಷ್ಣಾ ಪರಾಪೂರ,ಉಪಾಧ್ಯಕ್ಷೆ ಶಕುಂತಲಾ ಅಕ್ಕಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬೆಳಗಾಂವಿಯ ಪ್ರಾದೇಶಿಕ ಆಯುಕ್ತರಿಂದ ಸದಸ್ಯತ್ವ ರದ್ದುಗೊಂಡಿರುವ ಬಿಜೆಪಿಯ ಮೂವರು ಸದಸ್ಯರಿಗೆ ಪಾಲ್ಗೊಳ್ಳಲು ರಾಜ್ಯ ಉಚ್ಛ ನ್ಯಾಯಾಲಯ ಅನುಮತಿ ನೀಡಿತ್ತು.ಉಚ್ಛ ನ್ಯಾಯಾಲಯದ ಆದೇಶವನ್ನು ನಗರಸಭೆ ಆವರಣಕ್ಕೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ತರುವಷ್ಟರಲ್ಲಿಯೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿತ್ತು.ನಗರಸಭೆಯ ಸಭಾಭವನದ ಬಾಗಿಲು ಮುಚ್ಚಿದ್ದರಿಂದ ಉಚ್ಚ ನ್ಯಾಯಾಲಯದ ಆದೇಶ ಪಾಲನೆಯಾಗಿರಲಿಲ್ಲ.
ಪ್ರಾದೇಶಿಕ ಆಯುಕ್ತರಿಂದ ಸದಸ್ಯತ್ವ ರದ್ದಾಗಿರುವ ಬಿಜೆಪಿಯ ಉಷಾ ಮಹೇಶ ದಾಸರ,ಅನೀಲ ಅಬ್ಬಿಗೇರಿ,ಗೂಳಪ್ಪ ಮುಶೀಗೇರಿ ಅವರನ್ನು ಸಭಾ ಭವನದೊಳಗೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಗದಗ ನಗರಸಭೆಯ ೩೫ ಸದಸ್ಯರ ಬಲದಲ್ಲಿ ೧೮ ಬಿಜೆಪಿ,೧೭ ಜನ ಕಾಂಗ್ರೇಸ್ ಸದಸ್ಯರಿದ್ದಾರೆ. ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದಾಗಿದ್ದರಿಂದ ೧೫ಕ್ಕೆ ಕುಸಿತವಾಗಿದೆ.ಕಾಂಗ್ರೇಸ್‌ನ ಬಲ ೧೭ರೊಂದಿಗೆ ಗದಗ ಶಾಸಕ,ಸಚಿವ ಡಾ.ಎಚ್.ಕೆ.ಪಾಟೀಲರ ಮತದೊಂದಿಗೆ ೧೮ ಕ್ಕೇರಿತ್ತು.
ಉಚ್ಛ ನ್ಯಾಯಾಲಯ ಆದೇಶ ನೀಡಿದ ನಂತರವೂ ಚುನಾವಣೆಯನ್ನು ನಡೆಸಿದ ಉಪವಿಭಾಗಾಧಿಕಾರಿಗಳ ಕ್ರಮವನ್ನು ಮಾಜಿ ಮುಖ್ಯಮಂತ್ರಿ ,ಸಂಸದ ಬಸವರಾಜ ಬೊಮ್ಮಾಯಿ,ಮಾಜಿ ಸಚಿವ,ಶಾಸಕ ಸಿ.ಸಿ.ಪಾಟೀಲ,ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ತೀವ್ರವಾಗಿ ಖಂಡಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸುವದಾಗಿ ಹೇಳಿದ್ದರು.

Previous articleಎಪಿಕ್ ಸಂಖ್ಯೆಗಳಲ್ಲಿ ನಕಲು: ನಕಲಿ ಮತದಾರರನ್ನು ಸೂಚಿಸುವುದಿಲ್ಲ
Next articlePUC ಪರೀಕ್ಷೆಯಲ್ಲಿ ನಕಲು ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ