ನಕ್ಸಲೀಯರು ಇರಿಸಿದ ಐಇಡಿ ಸ್ಫೋಟಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಹುತಾತ್ಮ

ಸುಕ್ಮಾ: ನಕ್ಸಲೀಯರು ಇರಿಸಿದ ಸುಧಾರಿತ ಸ್ಫೋಟಕ ಸಾಧನ (IED)ಸ್ಫೋಟಗೊಂಡು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ASP ಮತ್ತು ಇತರ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಕೊಂಟಾ-ಎರ್ರಾಬೋರ್ ರಸ್ತೆಯ ದೊಂಡ್ರಾ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2013ರ ಬ್ಯಾಚ್‌ನ ರಾಜ್ಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕೊಂಟಾ ವಿಭಾಗ) ಆಕಾಶ್ ರಾವ್ ಗಿರೆಪುಂಜೆ ಅವರು ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ತಿಳಿಸಿದ್ದು, ನಕ್ಸಲೀಯರು ಹಿಂಸಾಚಾರವನ್ನು ದೂರವಿಡಬೇಕು, ಮುಖ್ಯವಾಹಿನಿಗೆ ಬರಬೇಕು. ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶರ್ಮಾ ಹೇಳಿದ್ದಾರೆ. ಜೂನ್ 10 ರ ಬಂದ್‌ಗೆ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ವಲಯಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದ್ದು, ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಕೂಂಬಿಂಗ್ ಕಾರ್ಯಾಚರಣೆಗಳು ನಡೆಯುತ್ತಿವೆ.