ಹುಬ್ಬಳ್ಳಿ: ನಕಲಿ ಲೋಕಾಯುಕ್ತ ಪೊಲೀಸ್ ಹೆಸರಲ್ಲಿ ಮಹಾನಗರ ಪಾಲಿಕೆ ಎಂಜಿನಿಯರ್ ಗೆ ಹಣಕ್ಕೆ ಬೇಡಿಕೆ ಇಟ್ಟು, ಬೆದರಿಸಿದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಎಂಜಿನಿಯರ್ ವಿಲಾಸ ಅವರಿಗೆ ಹಣಕ್ಕಾಗಿ ಲೋಕಾಯುಕ್ತ ಪೊಲೀಸ್ ಹೆಸರಿನಲ್ಲಿ ಬೇಡಿಕೆ ಇಡಲಾಗಿತ್ತು. ಈ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಸತ್ತೂರು ನಿವಾಸಿಗಳಾದ ಶರಣು ಪಾಟೀಲ ಮತ್ತು ಜಾಕೀರ್ ಮುಲ್ಲಾ ಎಂಬುವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಶರಣು ಪಾಟೀಲ ಮತ್ತು ಮಹಾಂತೇಶ ಹಿರೇಮಠ ತಲೆಮರೆಸಿಕೊಂಡಿದ್ದಾರೆ.
ಎಂಜಿನಿಯರ್ ವಿಲಾಸ ಅವರಿಗೆ ಕರೆ ಮಾಡಿರುವ ಆರೋಪಿಗಳು, ನಿಮ್ಮ ವಿರುದ್ಧ ಲೋಕಾಯುಕ್ತ ದೂರು ದಾಖಲಾಗಿದ್ದು, ಸತ್ತೂರಿನಲ್ಲಿರುವ ಕಚೇರಿಗೆ ಬಂದು ಇತ್ಯರ್ಥ ಮಾಡಿಕೊಳ್ಳಲು ಹೇಳಿದ್ದರು. ಅಲ್ಲಿಗೆ ಅವರು ತೆರಳಿದಾಗ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.